ಶರದ್ ಪವಾರ್ ನಿವಾಸದಲ್ಲಿ ನಡೆದ ಸಭೆ ರಾಜಕೀಯ ಸ್ವರೂಪದ್ದಾಗಿರಲಿಲ್ಲ: ಎನ್‌ಸಿಪಿ
ಹೊಸದಿಲ್ಲಿ,ಜೂ.22: ಮುಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ತೃತೀಯ ರಂಗ ರಚನೆಯ ಕಸರತ್ತು ಎಂಬ ವರದಿಗಳಿಂದಾಗಿ ಅತಿಯಾದ ಗಮನವನ್ನು ಸೆಳೆದಿದ್ದ ಮಂಗಳವಾರ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ ಇಲ್ಲಿಯ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಟಿಎಂಸಿ, ಆಪ್ ಮತ್ತು ಎಡರಂಗ ಸೇರಿದಂತೆ ಎಂಟು ಪಕ್ಷಗಳು ಭಾಗಿಯಾಗಿದ್ದು,ಕಾಂಗ್ರೆಸ್ ಪಕ್ಷದ ಉಪಸ್ಥಿತಿ ಇರಲಿಲ್ಲ.
ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸಲು ತನ್ನ ರಾಷ್ಟ್ರ ಮಂಚ್ ಸಂಘಟನೆಯ ಸಮಾವೇಶಕ್ಕೆ ಆತಿಥೇಯರಾಗುವಂತೆ ತಾನು ಪವಾರ್ ಅವರನ್ನು ಕೋರಿದ್ದೆ ಎಂದು ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಅವರು ತಿಳಿಸಿದರು.
ಸಭೆಯನ್ನು ಸಿನ್ಹಾ ಕರೆದಿದ್ದರು, ಪವಾರ್ ಅಲ್ಲ. ಇದು ರಾಜಕೀಯ ಸಭೆಯಾಗಿರಲಿಲ್ಲ ಎಂದು ಎನ್ಸಿಪಿ ನಾಯಕ ಮಜೀದ್ ಮೆಮನ್ ಅವರು ಒತ್ತಿ ಹೇಳಿದರು. ಮಹಾರಾಷ್ಟ್ರದಲ್ಲಿ ತನ್ನ ಮಿತ್ರಪಕ್ಷವಾಗಿರುವ ಕಾಂಗ್ರೆಸ್ ಅನ್ನು ಬಿಟ್ಟು ಸಭೆ ನಡೆಸುವುದು ಎನ್‌ಸಿಪಿಗೆ ಪೇಚನ್ನುಂಟು ಮಾಡುತ್ತಿತ್ತು.
‘ಕಾಂಗ್ರೆಸ್ ಹೊರತುಪಡಿಸಿ ತೃತೀಯ ರಂಗ ರಚನೆಗಾಗಿ ಸಭೆಯು ನಡೆದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಇದು ನಿಜವಲ್ಲ. ಇಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲ. ನಾವು ಎಲ್ಲ ಸಮಾನ ಮನಸ್ಕ ಜನರನ್ನು ಕರೆದಿದ್ದೆವು. ವಿವೇಕ ತನ್ಹಾ,ಮನೀಷ ತಿವಾರಿ,ಅಭಿಷೇಕ ಮನು ಸಿಂಘ್ವಿ ಮತ್ತು ಶತ್ರುಘ್ನ ಸಿನ್ಹಾರನ್ನೂ ನಾನು ಆಹ್ವಾನಿಸಿದ್ದೆ. ಅವರಿಗೆ ಬರಲಾಗಿಲ್ಲ. ನಾವು ಕಾಂಗ್ರೆಸ್ ಪಕ್ಷವನ್ನು ಆಹ್ವಾನಿಸಿರಲಿಲ್ಲ ಎನ್ನುವುದು ನಿಜವಲ್ಲ ’ ಎಂದು ಮೆಮನ್ ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಗೈರುಹಾಜರಿಯನ್ನು ಪ್ರಶ್ನಿಸಿದ್ದ ಸುದ್ದಿಗಾರರಿಗೆ ತಿಳಿಸಿದರು.
ಎನ್ಸಿ ನಾಯಕ ಉಮರ್ ಅಬ್ದುಲ್ಲಾ,ಆರ್ಎಲ್ಡಿಯ ಜಯಂತ ಚೌಧರಿ,ಎಸ್ಪಿಯ ಘನಶ್ಯಾಮ ತಿವಾರಿ,ಆಪ್ ನ ಸುಶೀಲ್ ಗುಪ್ತಾ, ಸಿಪಿಐನ ಬಿನೊಯ ವಿಶ್ವಂ ಮತ್ತು ಸಿಪಿಎಂನ ನಿಲೋತ್ಪಲ್ ಬಸು ಅವರು ಸಭೆಯಲ್ಲಿ ಪಾಲ್ಗೊಂಡವರಲ್ಲಿ ಸೇರಿದ್ದರು.
ಅದು ರಾಜಕೀಯ ಸಭೆಯಾಗಿರಲಿಲ್ಲ, ಅದು ಸಮಾನ ಮನಸ್ಕ ಜನರ ನಡುವಿನ ಸಂವಾದವಾಗಿತ್ತು. ಕೋವಿಡ್ ನಿರ್ವಹಣೆ, ಸಂಸ್ಥೆಗಳ ಮೇಲಿನ ‘ದಾಳಿ’ ಮತ್ತು ನಿರುದ್ಯೋಗದಂತಹ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಬಸು ಸುದ್ದಿಗಾರರಿಗೆ ತಿಳಿಸಿದರು.
ನಿವೃತ್ತ ನ್ಯಾಯಾಧೀಶ ಎ.ಪಿ.ಶಾ,ಮಾಜಿ ರಾಯಭಾರಿ ಕೆ.ಸಿ.ಸಿಂಗ್ ಮತ್ತು ಕವಿ ಜಾವೇದ್ ಅಖ್ತರ್ ಅವರೂ ಸಭೆಯಲ್ಲಿ ಭಾಗವಹಿಸಿದ್ದರು. ಆಹ್ವಾನಿತರಾಗಿದ್ದ ಹಿರಿಯ ವಕೀಲ ಕೆಟಿಎಸ್ ತುಳಸಿ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಕುರೇಷಿ ಮತ್ತು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ಸಭೆಗೆ ಗೈರಾಗಿದ್ದರು.
ಪವಾರ್ ಅವರು ಸೋಮವಾರ ಚುನಾವಣಾ ರಣನೀತಿ ತಜ್ಞ ಪ್ರಶಾಂತ ಕಿಶೋರ್ ಅವರನ್ನು ಭೇಟಿಯಾದ ಬಳಿಕ ಪ್ರತಿಪಕ್ಷಗಳ ಸಭೆಯನ್ನು ಕರೆಯಲಾಗಿದ್ದ ಹಿನ್ನೆಲೆಯಲ್ಲಿ ತೃತೀಯ ರಂಗ ರಚನೆಯ ಕುರಿತು ಊಹಾಪೋಹಗಳು ಗರಿಗೆದರಿದ್ದವು.