ಪಶ್ಚಿಮ ಬಂಗಾಳ: ಗಂಗಾಜಲ ಸಿಂಪಡಿಸಿ ಟಿಎಂಸಿ ಪಕ್ಷಕ್ಕೆ ಮರು ಸೇರ್ಪಡೆಯಾದ 200 ಬಿಜೆಪಿ ಕಾರ್ಯಕರ್ತರು

ಕೋಲ್ಕತಾ, ಜೂ. 22: ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯ ಸುಮಾರು 200 ಕಾರ್ಯಕರ್ತರು ಗಂಗಾ ಜಲದಿಂದ ಶುದ್ಧೀಕರಣಗೊಂಡು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದಾರೆ.
ತಾವು ಬಿಜೆಪಿಗೆ ಸೇರಿರುವುದು ಪ್ರಮಾದ ಎಂದು ಕಾರ್ಯಕರ್ತರು ಹೇಳಿದ್ದಾರೆ. ಅವರು ತಮ್ಮ ತಲೆ ಬೋಳಿಸಿಕೊಂಡಿದ್ದಾರೆ ಹಾಗೂ ತಮ್ಮ ತಪ್ಪಿನ ಪ್ರಾಯಶ್ಚಿತಕ್ಕೆ ಗಂಗಾಜಲವನ್ನು ಸಿಂಪರಣೆ ಮಾಡಿಕೊಂಡಿದ್ದಾರೆ. ಶುದ್ದೀಕರಣದ ಬಳಿಕ ಟಿಎಂಸಿಗೆ ಮರು ಸೇರ್ಪಡೆಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೂಗ್ಲಿಯಲ್ಲಿ ಟಿಎಂಸಿ ಸೇರಿದ ಕಾರ್ಯಕರ್ತರು ಟಿಎಂಸಿ ಪತಾಕೆಯನ್ನು ಎತ್ತಿ ಹಿಡಿದರು ಹಾಗೂ ಆರಂಭಾಗ್ನ ಟಿಎಂಸಿ ಸಂಸದೆ ಅಪರೂಪ ಪೊದ್ದಾರ್ ಅವರೊಂದಿಗೆ ಕೈಜೋಡಿಸಿ ಒಗ್ಗಟ್ಟು ಪ್ರದರ್ಶಿಸಿದರು.
ಬಡವರಿಗೆ ಉಚಿತ ಆಹಾರ ಪೂರೈಸಲು ಪಕ್ಷ ಆರಂಭಾಘ್ನಲ್ಲಿ ಮಂಗಳವಾರ ಕಾರ್ಯಕ್ರಮ ಆಯೋಜಿಸಿತ್ತು ಎಂದು ಅಪರೂಪ್ ಪೊದ್ದಾರ್ ಹೇಳಿದ್ದಾರೆ. ಕಾರ್ಯಕ್ರಮದ ಸಂದರ್ಭ ದಲಿತ ಸಮುದಾಯದ ಕೆಲವರು ಇಲ್ಲಿಗೆ ಆಗಮಿಸಿದರು ಹಾಗೂ ತಾವು ಬಿಜೆಪಿಗೆ ಸೇರಿರುವುದು ಪ್ರಮಾದ ಎಂದು ಹೇಳಿದರು. ಅವರು ಟಿಎಂಸಿಗೆ ಮರು ಸೇರ್ಪಡೆಗೊಳ್ಳಲು ಬಯಸಿದರು. ತಮ್ಮ ತಪ್ಪಿಗೆ ಪ್ರಾಯಶ್ಚಿತವಾಗಿ ಗಂಗಾಜಲದಿಂದ ಶುದ್ದೀಕರಣಗೊಂಡ ಬಳಿಕ ಮತ್ತೆ ಟಿಎಂಸಿಗೆ ಸೇರ್ಪಡೆಯಾದರು ಎಂದು ಅಪರೂಪ ಪೊದ್ದಾರ್ ತಿಳಿಸಿದ್ದಾರೆ.