ಒಲಿಂಪಿಕ್ಸ್ ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ ದಿಲ್ಲಿ ಕ್ರೀಡಾ ವಿಶ್ವವಿದ್ಯಾಲಯದ ಮೊದಲ ಉಪ ಕುಲಪತಿಯಾಗಿ ನೇಮಕ

ಹೊಸದಿಲ್ಲಿ: ದಿಲ್ಲಿ ಕ್ರೀಡಾ ವಿಶ್ವವಿದ್ಯಾಲಯದ ಮೊದಲ ಉಪಕುಲಪತಿಯನ್ನಾಗಿ ಮಾಜಿ ಒಲಿಂಪಿಕ್ಸ್ ಪದಕ ವಿಜೇತೆ ವೇಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿಯವರನ್ನು ದಿಲ್ಲಿ ಸರಕಾರ ಮಂಗಳವಾರ ನೇಮಿಸಿದೆ.
" ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಲ್ಲೇಶ್ವರಿಯವರನ್ನು ವಿಶ್ವವಿದ್ಯಾಲಯದ ಮೊದಲ ಉಪಕುಲಪತಿಯನ್ನಾಗಿ ನೇಮಿಸಲು ದಿಲ್ಲಿ ಕ್ರೀಡಾ ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ ಲೆಫ್ಟಿನೆಂಟ್ ಗವರ್ನರ್ ಸಂತೋಷಪಡುತ್ತಾರೆ" ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಮಾಜಿ ವೇಟ್‌ಲಿಫ್ಟರ್ ಮಲ್ಲೇಶ್ವರಿ ಅವರು ಒಲಿಂಪಿಕ್ಸ್ ಪದಕವನ್ನು ದೇಶಕ್ಕೆ ಗೆದ್ದುಕೊಟ್ಟ ಮೊದಲ ಭಾರತೀಯ ಮಹಿಳೆ.
2000 ರಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ 'ಸ್ನ್ಯಾಚ್' ಹಾಗೂ 'ಕ್ಲೀನ್ ಮತ್ತು ಜರ್ಕ್' ವಿಭಾಗಗಳಲ್ಲಿ 110 ಕಿಲೋಗ್ರಾಂ ಹಾಗೂ 130 ಕಿಲೋಗ್ರಾಂಗಳನ್ನು ಎತ್ತುವ ಮೂಲಕ ಇತಿಹಾಸ ನಿರ್ಮಿಸಿದ್ದರು.
ದಿಲ್ಲಿ ವಿಧಾನಸಭೆಯು 2019 ರಲ್ಲಿ ದಿಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು (ಡಿಎಸ್‌ಯು) ಸ್ಥಾಪಿಸುವ ಮಸೂದೆಯೊಂದನ್ನು ಅಂಗೀಕರಿಸಿತು. ಇದು ಕ್ರಿಕೆಟ್, ಫುಟ್‌ಬಾಲ್ ಹಾಗೂ ಹಾಕಿ ಸಹಿತ ಇತರ ಕ್ರೀಡೆಗಳಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಗಳನ್ನು ನೀಡುತ್ತದೆ.