ವಿಜಯ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿಗೆ ಸೇರಿರುವ 9,371 ಕೋ.ರೂ. ಮೌಲ್ಯದ ಆಸ್ತಿ ಬ್ಯಾಂಕಿಗೆ ವರ್ಗಾಯಿಸಿದ ಈಡಿ

photo:Indian express
ಹೊಸದಿಲ್ಲಿ: ಪರಾರಿಯಾಗಿರುವ ಉದ್ಯಮಿಗಳಾದ ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಹಾಗೂ ನೀರವ್ ಮೋದಿ ಅವರು ಮಾಡಿದ್ದ ಹಣಕಾಸಿನ ವಂಚನೆಯಿಂದಾಗಿ ನಷ್ಟ ಅನುಭವಿಸಿದ್ದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 9,371. 17 ಕೋಟಿ ರೂ.ಮೌಲ್ಯದ ಜಪ್ತಿ ಮಾಡಿರುವ ಮೂವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಈಡಿ) ವರ್ಗಾಯಿಸಿದೆ.
ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿರುವ ಒಟ್ಟು ಆಸ್ತಿ ಮೌಲ್ಯ 18,170.02 ಕೋಟಿ ರೂ.
ಪಿಎಂಎಲ್ಎ ಅಡಿಯಲ್ಲಿ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು 18,170.02 ಕೋಟಿ ರೂ. ಮೌಲ್ಯದ (ಬ್ಯಾಂಕುಗಳಿಗೆ ಒಟ್ಟು ನಷ್ಟದ 80.45ಶೇ.) ವಶಪಡಿಸಿಕೊಂಡಿದ್ದಲ್ಲದೆ, ವಶಪಡಿಸಿಕೊಂಡ ಸ್ವತ್ತುಗಳ ಒಂದು ಭಾಗ 9,371. 17 ಕೋಟಿ ರೂ.ವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹಾಗೂ ಕೇಂದ್ರ ಸರಕಾರಕ್ಕೆ ವರ್ಗಾಯಿಸಲಾಗಿದೆ ಎಂದು ಏಜೆನ್ಸಿ ತಿಳಿಸಿದೆ.
ಭಾರತದಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ಪರಾರಿಯಾದ ಉದ್ಯಮಿಗಳಾದ ವಿಜಯ್ ಮಲ್ಯ ಹಾಗೂ ನೀರವ್ ಮೋದಿಯನ್ನು ಇಂಗ್ಲೆಂಡ್ ನಿಂದ ಹಸ್ತಾಂತರಿಸುವಂತೆ ಹೊಸದಿಲ್ಲಿ ಕೋರಿದೆ.
ಪರಾರಿಯಾದ ಮೂವರು ಉದ್ಯಮಿಗಳು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 22,586 ಕೋಟಿ ರೂ. ವಂಚಿಸಿದ್ದಾರೆ. ಈ ಪೈಕಿ ಜಾರಿ ನಿರ್ದೇಶನಾಲಯವು ಶೇ.80.45(18,170 ಕೋ.ರೂ.)ಆಸ್ತಿಯನ್ನು ಲಗತ್ತಿಸಿದೆ/ವಶಪಡಿಸಿಕೊಂಡಿದೆ.