ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ: ಶಾಸಕ ಅಖಂಡ ಶ್ರೀನಿವಾಸಮೂರ್ತಿ

ಬೆಂಗಳೂರು, ಜೂ. 23: `ವಿಧಾನಸಭೆಯ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಿದರೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 130ರಿಂದ 150 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲಿದೆ' ಎಂದು ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.
ಬುಧವಾರ ಇಲ್ಲಿನ ಶಾಸಕರ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು 2013-18ರ ವರೆಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಇಂದಿಗೂ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ. ಜನತೆ ಕೂಡ ಅವರು ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದಾರೆ. ಹೀಗಾಗಿ ನನ್ನ ಅಭಿಪ್ರಾಯವೂ ಅದೇ ಆಗಿದೆ ಎಂದು ಧ್ವನಿಗೂಡಿಸಿದರು.
ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಬ್ಬರು ನಮ್ಮ ಪಕ್ಷದ ನಾಯಕರು. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ 130 ರಿಂದ 150 ಸೀಟ್ ಬರಲಿದೆ. ಹೀಗಾಗಿ ಸಿದ್ದರಾಮಯ್ಯರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಎಂದು ಘೋಷಿಸುವಂತೆ ಅವರ ಪರ ಇರುವ ನಾಯಕರೆಲ್ಲ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇವೆ. ಮಾತ್ರವಲ್ಲ, ಒತ್ತಡವನ್ನು ಹೇರುತ್ತೇವೆ ಎಂದು ಅಖಂಡ ಶ್ರೀನಿವಾಸಮೂರ್ತಿ ತಿಳಿಸಿದರು.
ಕೋವಿಡ್ ಕಾರಣಕ್ಕೆ ವರಿಷ್ಠರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರಾಜ್ಯ ಉಸ್ತುವಾರಿಯನ್ನು ಭೇಟಿ ಮಾಡಿ ಅವರಿಗೆ ನನ್ನ ನಿವಾಸದ ಮೇಲೆ ಆದ ದಾಳಿ ಘಟನೆ ಬಗ್ಗೆ ವಿವರಣೆ ಕೊಟ್ಟಿದ್ದೇನೆ. ಸಂಪತ್ ರಾಜ್ ವಿರುದ್ಧ ದೂರು ಕೊಟ್ಟಿದ್ದೇನೆ. ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಿದ್ದೇನೆ. ನಮ್ಮ ವಿರೋಧಿಗಳನ್ನು ಶಿವಕುಮಾರ್ ಜೊತೆ ಸೇರಿಸಿಕೊಂಡು ಓಡಾಡ್ತಿದ್ದಾರೆ. ಸಿದ್ದರಾಮಯ್ಯ, ಝಮೀರ್ ಅಹ್ಮದ್ ಖಾನ್ ನನ್ನ ಜೊತೆಗಿದ್ದಾರೆಂದು ಅಖಂಡ ಶ್ರೀನಿವಾಸಮೂರ್ತಿ ತಿಳಿಸಿದರು.
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ಗಲಭೆ ಹಾಗೂ ನನ್ನ ನಿವಾಸಕ್ಕೆ ಬೆಂಕಿ ಹಾಕಿದ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷರು ಯಾವ ಕ್ರಮವನ್ನು ಕೈಗೊಳ್ಳಲಿಲ್ಲ. ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆ ನೀಡಿಲ್ಲ. ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಉಚ್ಚಾಟನೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಕ್ರಮಕ್ಕೆ ಆಗ್ರಹಿಸಿ ಮನವಿ ಮಾಡಿದ್ದೇನೆ. ಇಲ್ಲಿಯವರೆಗೆ ಅಧ್ಯಕ್ಷರು ಕ್ರಮ ತೆಗೆದುಕೊಂಡಿಲ್ಲ ಎಂದು ಅಖಂಡ ಶ್ರೀನಿವಾಸಮೂರ್ತಿ ದೂರಿದರು.
ನಾನು ಹಲವು ಬಾರಿ ಮನವಿ ಮಾಡಿದರೂ ಕ್ರಮ ವಹಿಸಿಲ್ಲ. ಇನ್ನಾದರೂ ಸಂಪತ್ ರಾಜ್ ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದ ಅಖಂಡ ಶ್ರೀನಿವಾಸ ಮೂರ್ತಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಪುಲಕೇಶಿನಗರ ಕ್ಷೇತ್ರದಿಂದ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಪ್ರಸನ್ನಕುಮಾರ್ ಪಕ್ಷಕ್ಕೆ ಬಂದಿದ್ದರೂ, ನನಗೆ ಅನ್ಯಾಯ ಆಗುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.







