ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇಂಟರ್ನೆಟ್ ಸ್ಥಗಿತ ಸಾಧ್ಯತೆ ಹೆಚ್ಚು: ಅಧ್ಯಯನ ವರದಿ

ಹೊಸದಿಲ್ಲಿ : ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇಂಟರ್ನೆಟ್ ಬಂದ್ ಮಾಡುವ ಸಂಭಾವ್ಯತೆ ಬಿಜೆಪಿಯೇತರ ಆಡಳಿತದ ರಾಜ್ಯಗಳಿಗಿಂತ ಹೆಚ್ಚಾಗಿದೆ ಎಂದು ಆಮ್‍ಸ್ಟೆರ್ ಡ್ಯಾಮ್ ವಿವಿಯ ಕ್ರಿಸ್ ರುಯಿಗ್ರೊಕ್ ಅವರು ನಡೆಸಿದ ವಿಶ್ಲೇಷಣೆಯಿಂದ ತಿಳಿದು ಬಂದಿದೆ.
2012ರಿಂದೀಚೆಗಿನ ದತ್ತಾಂಶಗಳ ಮೂಲಕ ಮೇಲಿನ ಮಾಹಿತಿ ಸಂಗ್ರಹಿಸಲಾಗಿದೆಯಲ್ಲದೆ ಇಂಟರ್ನೆಟ್ ಸ್ಥಗಿತ ಸಾಧ್ಯತೆ ಬಿಜೆಪಿಯೇತರ ರಾಜ್ಯಗಳಲ್ಲಿ ಸಮಯ ಕಳೆದಂತೆ ಹೆಚ್ಚುತ್ತಿದೆ ಎಂದೂ ವಿಶ್ಲೇಷಣೆಯಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ಒಂದು ತಿಂಗಳಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಅಂತರ್ಜಾಲ ಸ್ಥಗಿತ ಸಾಧ್ಯತೆ ಶೇ3ರಷ್ಟಿದ್ದರೆ ಬಿಜೆಪಿಯೇತರ ರಾಜ್ಯಗಳಲ್ಲಿ ಈ ಸಾಧ್ಯತೆ ಶೇ0.8ರಷ್ಟಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಈ ಅಧ್ಯಯನದಲ್ಲಿ ಜಮ್ಮು ಕಾಶ್ಮೀರವನ್ನು ಒಳಪಡಿಸಲಾಗಿರಲಿಲ್ಲ.
ಭಾರತದಲ್ಲಿ 2020ರಲ್ಲಿ 115 ಬಾರಿ ಇಂಟರ್ನೆಟ್ ಸ್ಥಗಿತ ನಡೆಸಲಾಗಿದ್ದು ಇದು ಜಗತ್ತಿನ ಇತರ ದೇಶಗಳಿಗೆ ಹೋಲಿಸಿದಾಗ ಗರಿಷ್ಠ ಸಂಖ್ಯೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಯೆಮೆನ್‍ನಲ್ಲಿ ಕೇವಲ 5 ಬಾರಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.





