ಕೋವಿಡ್ ಸಂಬಂಧಿ ಉತ್ಪನ್ನಗಳ ಮೇಲೆ ಜಗತ್ತಿನಲ್ಲಿಯೇ ಗರಿಷ್ಠ ಆಮದು ಸುಂಕ ವಿಧಿಸುತ್ತಿರುವ ಭಾರತ: ಅಧ್ಯಯನ ವರದಿ

ಚೆನ್ನೈ: ಕೋವಿಡ್-19 ಸಂಬಂಧಿತ ಉತ್ಪನ್ನಗಳಾದ ಟೆಸ್ಟ್ ಕಿಟ್‍ಗಳು, ಸ್ವಾಬ್‍ಗಳು, ಸ್ಟೆರಿಲೈಝೇಶನ್ ಉತ್ಪನ್ನಗಳು, ವೈರಾಣು ನಾಶಕಗಳು, ಪಿಪಿಇ ಕಿಟ್‍ಗಳು, ಇನ್‍ಫ್ರಾರೆಡ್ ಥರ್ಮಾಮೀಟರ್‍ಗಳು ಹಾಗೂ ಲಸಿಕೆಗೆ ಅಗತ್ಯವಿರುವ ಕಚ್ಛಾ ವಸ್ತುಗಳ ಮೇಲೆ ಜಗತ್ತಿನಲ್ಲಿಯೇ ಗರಿಷ್ಠ ಆಮದು ಸುಂಕ ವಿಧಿಸುವ ದೇಶ ಭಾರತವಾಗಿದೆ ಎಂದು timesofindia.com ವರದಿ ಮಾಡಿದೆ.
ಮುಂಬೈಯ ಇಂದಿರಾ ಗಾಂಧಿ ಇನ್‍ಸ್ಟಿಟ್ಯೂಟ್ ಆಫ್ ಡೆವಲೆಪ್ಮೆಂಟ್ ರಿಸರ್ಚ್ ತಜ್ಞರು ನಡೆಸಿದ ಅಧ್ಯಯನದಲ್ಲಿ ಮೇಲಿನ ವಿಚಾರ ತಿಳಿದು ಬಂದಿದೆ. ಭಾರತದಲ್ಲಿ ಎಲ್ಲಾ ಕೋವಿಡ್ ಸಂಬಂಧಿ ಉತ್ಪನ್ನಗಳ ಮೇಲಿನ ಆಮದು ಸುಂಕ ಶೇ15.2ರಷ್ಟಾಗಿದ್ದು, ಚೀನಾಗೆ ಹೋಲಿಸಿದಾಗ ಇದು ಎರಡು ಪಟ್ಟು ಹೆಚ್ಚಾಗಿದ್ದರೆ ಅಮೆರಿಕಾಗೆ ಹೋಲಿಸಿದರೆ ಏಳು ಪಟ್ಟು ಅಧಿಕವಾಗಿದೆ. ಕೆಲ ಆರ್ಥಿಕವಾಗಿ ಹಿಂದುಳಿದ ದೇಶಗಳಾದ ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಆಮದು ಸುಂಕಗಳಿಗಿಂತಲೂ ಭಾರತ ವಿಧಿಸುವ ಆಮದು ಸುಂಕ ಶೇ60ರಷ್ಟು ಅಧಿಕವಾಗಿದೆ ಎಂದು ಅಧ್ಯಯನ ಕಂಡುಕೊಂಡಿದೆ.
ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಎಂಡ್ ಡೆವಲಪ್ಮೆಂಟ್ ಮತ್ತು ಆರ್ಗನೈಝೇಶನ್ ಫಾರ್ ಇಕನಾಮಿಕ್ ಕೊ-ಆಪರೇಷನ್ ಎಂಡ್ ಡೆವಲೆಪ್ಮೆಂಟ್ ಒದಗಿಸಿದ ಅಂಕಿಅಂಶಗಳಿಂದ ಮೇಲಿನ ಮಾಹಿತಿ ಸಂಗ್ರಹಿಸಲಾಗಿದೆ.
ಎಪ್ರಿಲ್ 2020 ಹಾಗೂ ಫೆಬ್ರವರಿ 2021ರ ನಡುವೆ ಎಲ್ಲಾ ಕೋವಿಡ್ ಸಂಬಂಧಿ ಉತ್ಪನ್ನಗಳ ಆಮದು ಪ್ರಮಾಣ ಭಾರತದಲ್ಲಿ ಹೆಚ್ಚಾಗಿದೆ. ಈ ವರ್ಷದ ಎಪ್ರಿಲ್ ತಿಂಗಳಲ್ಲಿ ಕೇಂದ್ರ ಸರಕಾರ ಆಕ್ಸಿಜನ್, ಕೋವಿಡ್ ಲಸಿಕೆಗಳು ಹಾಗೂ ಆಕ್ಸಿಜನ್ ಸಂಬಂಧಿ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಮೂರು ತಿಂಗಳ ಮಟ್ಟಿಗೆ ಮನ್ನಾ ಮಾಡಿತ್ತು.







