ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ನಮ್ಮ ನಾಯಕಿ: ಸಲ್ಮಾನ್ ಖುರ್ಷಿದ್

ಹೊಸದಿಲ್ಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ತಮ್ಮನ್ನು ತಾವು ಪ್ರಸ್ತುತಪಡಿಸುವ ವಿಧಾನವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ನಿರ್ಧರಿಸುತ್ತಾರೆ ಎಂದಿರುವ ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಅವರು ಪ್ರಿಯಾಂಕಾ ನಮ್ಮ "ನಾಯಕಿ". ರಾಜ್ಯದಲ್ಲಿ ಪಕ್ಷದ ಉಸ್ತುವಾರಿಯನ್ನು ಅವರೇ ಮುನ್ನಡೆಸುತ್ತಾರೆ ಎಂದು ಪ್ರತಿಪಾದಿಸಿದರು.
ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಪ್ರಮುಖ ಚಾಲೆಂಜರ್ ಆಗಿ ಹೊರಹೊಮ್ಮಲಿದೆ ಹಾಗೂ ಪಕ್ಷವು ತನ್ನ ಎಲ್ಲ ಶಕ್ತಿಯಿಂದ ಚುನಾವಣೆಯಲ್ಲಿ ಹೋರಾಡುವುದನ್ನು ಪ್ರಿಯಾಂಕಾ ಗಾಂಧಿ ಖಚಿತಪಡಿಸಲಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ಕಾಂಗ್ರೆಸ್ ಮೈತ್ರಿಗಾಗಿ ಕಾಯುವುದಿಲ್ಲ ಆದರೆ ನಮಗೆ ಏನು ಸಿಕ್ಕಿದೆಯೋ ಅದರೊಂದಿಗೆ ಚುನಾವಣೆಯಲ್ಲಿ ಕಠಿಣವಾಗಿ ಹೋರಾಡಲು ನಿರ್ಧರಿಸಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ಖುರ್ಷಿದ್ ಅವರು ಹೇಳಿದರು.
ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗ ಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಕೇಂದ್ರ ಸಚಿವರು, ನಾನು ಅದಕ್ಕೆ ಈಗಲೇ ಉತ್ತರಿಸಲು ಹೋಗುವುದಿಲ್ಲ. ಆದರೆ ಪ್ರಿಯಾಂಕಾ ಓರ್ವ ಅದ್ಭುತ, ಶ್ರೇಷ್ಠ ವ್ಯಕ್ತಿ’’ ಎಂದರು.