ವೈದ್ಯರಿಂದ ಚಿಕಿತ್ಸೆ ನಿರಾಕರಣೆ ಆರೋಪ: ದೂರುದಾರೆ, ವೈದ್ಯರು ಸಹಿತ 15ಕ್ಕೂ ಅಧಿಕ ಮಂದಿಯ ಹೇಳಿಕೆ ಪಡೆದ ತನಿಖಾ ತಂಡ

ಮಂಗಳೂರು, ಜೂ.23: ಎಂಟು ತಿಂಗಳ ಗರ್ಭಿಣಿ ಖತೀಜಾ ಜಾಸ್ಮೀನ್‌ಗೆ ವೈದ್ಯೆ ಡಾ.ಪ್ರಿಯಾ ಬಲ್ಲಾಳ್‌ರ ಪ್ರಭಾವದಿಂದ ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಡಾ. ಕಿಶೋರ್ ಕುಮಾರ್ ನೇತೃತ್ವದ ತನಿಖಾ ತಂಡವು ನಗರದ ವೆನ್ಲಾಕ್ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ವಿಚಾರಣೆ ನಡೆಸಿತು.
ಸಂತ್ರಸ್ತೆ ಖತೀಜಾ ಜಾಸ್ಮೀನ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಜಾಸ್ಮಿನ್‌ರ ಚಿಕ್ಕಪ್ಪ ಶಂಶೀರ್ ಅಲಿ, ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಆಸೀಫ್ ಚೊಕ್ಕಬೆಟ್ಟು ಅವರು ಘಟನೆಗೆ ಸಂಬಂಧಿಸಿದಂತೆ ವಿಸ್ತೃತವಾಗಿ ಲಿಖಿತ ಹೇಳಿಕೆ ನೀಡಿದರು.
ಅದಲ್ಲದೆ ವಿಜಯಾ ಮೆಟರ್ನಿಟಿ ಕ್ಲಿನಿಕ್‌ನ ಡಾ.ಪ್ರಿಯಾ ಬಲ್ಲಾಳ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಪ್ರಸಾದ್, ಡಾ.ವಿಜಯಾ, ಡಾ. ಶರಣ್, ಡಾ.ಶ್ರದ್ಧಾ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಡಾ. ಶರತ್ ಬಾಬು, ಡಾ. ಆಲಂ ನವಾಝ್, ಅತ್ತಾವರ ಕೆಎಂಸಿ ಆಸ್ಪತ್ರೆಯ ಡಾ. ಮುರಳೀಧರ್ ಯಡಿಯಲ್, ಸಿಟಿ ಆಸ್ಪತ್ರೆಯ ಡಾ. ವೀಣಾ ಭಟ್, ಮಂಗಳಾ ಆಸ್ಪತ್ರೆಯ ಡಾ. ಜಯಪ್ರಕಾಶ್ ಹಾಗೂ ಅಥೆನಾ, ಇಂಡಿಯಾನ, ಸಿಟಿ, ಮಂಗಳಾ, ಹೈಲಾಂಡ್, ಯುನಿಟಿ, ಅತ್ತಾವರ ಕೆಎಂಸಿ ಆಸ್ಪತ್ರೆಯ ಮುಖ್ಯಸ್ಥರು/ನಿರ್ದೇಶಕರು ಕೂಡ ಹೇಳಿಕೆ ನೀಡಿದರು.
ಗಲ್ಫ್ ರಾಷ್ಟ್ರದಲ್ಲಿ ಪತಿಯೊಂದಿಗಿದ್ದ ಖತೀಜಾ ಜಾಸ್ಮಿನ್ ಹೆರಿಗೆಗಾಗಿ ತವರಿಗೆ ಬಂದಿದ್ದರು. ಮೇ 19ರಂದು ಹೆರಿಗೆ ನೋವು ಕಾಣಿಸಿದಾಗ ಕುಟುಂಬ ವೈದ್ಯರಾಗಿದ್ದ ಡಾ.ಪ್ರಿಯಾ ಬಲ್ಲಾಳ್ ಅವರನ್ನು ಸಂಪರ್ಕಿಸಿದ್ದರು. ಅವರು ಸರಿಯಾಗಿ ಸ್ಪಂದಿಸದೆ ಬೇರೆ ಆಸ್ಪತ್ರೆಗಳಿಗೆ ಹೋಗುವಂತೆ ಹೇಳಿದ್ದರು. ಅಲ್ಲದೆ ಇತರ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡದಂತೆ ತಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಸಂತ್ರಸ್ತೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿಯು ಆರೋಗ್ಯ ಇಲಾಖೆಯ ಅಧೀನದಲ್ಲಿ ತನಿಖಾ ತಂಡವೊಂದನ್ನು ರಚಿಸಿದ್ದರು. ಈ ತಂಡವು ಬುಧವಾರ ಸಂತ್ರಸ್ತೆ ಸಹಿತ 15ಕ್ಕೂ ಅಧಿಕ ಮಂದಿಯಿಂದ ಪ್ರತ್ಯೇಕ ಹೇಳಿಕೆ ದಾಖಲಿಸಿಕೊಂಡಿದೆ.
''ನಾನು ನೀಡಿದ ದೂರಿನ ವಿಚಾರಣೆಯು ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ನಡೆಯಬೇಕಿತ್ತು. ಅಂದರೆ ವಿಪತ್ತು ನಿರ್ವಹಣಾ ಕಾಯ್ದೆಯ ಕಲಂ 25/2ರಲ್ಲಿ ನೇಮಕಗೊಂಡ ಸಮಿತಿಯ ವ್ಯಾಪ್ತಿಗೆ ಬರುತ್ತದೆ. ಅದರ ಹೊರತು ಬೇರೆ ಯಾವ ಸಮಿತಿಗೂ ನನ್ನ ದೂರನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ಮೇ 21ರಂದು ನಾನು ಹೆಣ್ಣು ಮಗುವಿಗೆ ಜನ್ಮ ನೀಡಿರುವೆ. ಪ್ರಸ್ತುತ ಬಾಣಂತಿಯ ಅವಧಿಯಾಗಿದ್ದು, ತನಿಖೆಗೆ ಹಾಜರಾಗಲು ನನಗೆ ಅನನುಕೂಲವಾಗುತ್ತದೆ. ಹಾಗಾಗಿ ನನ್ನ ಪರವಾಗಿ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ ಅವರಿಗೆ ಜವಾಬ್ದಾರಿ ನೀಡಿರುವೆ. ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡುವೆ. ನಮ್ಮ ದೂರಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಕೂಡ ಸಾಕ್ಷಿದಾರರಾಗಿರುತ್ತಾರೆ. ಕಾನೂನು ಪ್ರಕಾರ ಸಾಕ್ಷಿದಾರರು ಪ್ರಕರಣದ ತನಿಖೆಯನ್ನು ನಡೆಸುವಂತಿಲ್ಲ ಮತ್ತು ತೀರ್ಮಾನವನ್ನು ಕೈಗೊಳ್ಳುವಂತಿಲ್ಲ. ಮೇ 18ರಿಂದ 28ರವರೆಗಿನ ಹೈಲಾಂಡ್, ಕೆಎಂಸಿ ಅತ್ತಾವರ, ಲೇಡಿಗೋಶನ್, ಅಥೆನಾ, ಮಂಗಳಾ, ವೆನ್ಲಾಕ್, ಯುನಿಟಿ, ಸಿಟಿ ಆಸ್ಪತ್ರೆಯ ಸಿಸಿ ಕ್ಯಾಮರಾದ ಫೂಟೇಜ್‌ಗಳನ್ನು ಹಾಗೂ ಈ ಆಸ್ಪತ್ರೆಗಳ ಕಂಪ್ಯೂಟರ್ ಬಿಲ್, ಹಣ ಸ್ವೀಕೃತಿ ರಶೀದಿ, ದಾಖಲಾತಿ ಪತ್ರಗಳು, ಕರ್ತವ್ಯನಿರತ ವೈದ್ಯಾಥಿಕಾರಿಯ ವಿವರಗಳು ಇತ್ಯಾದಿ ದಾಖಲೆಗಳನ್ನು ಕೂಡ ಸಂಗ್ರಹಿಸಿ ಕಡತದಲ್ಲಿಡಬೇಕು ಎಂದು ಸಂತ್ರಸ್ತೆ ಖತೀಜಾ ಜಾಸ್ಮೀನ್ ಲಿಖಿತ ಪತ್ರದಲ್ಲಿ ಮನವಿ ಮಾಡಿದ್ದಾರೆ.
''ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಕ್ಕೆ ಬುಧವಾರ ನಮ್ಮ ಹೇಳಿಕೆಯನ್ನು ದಾಖಲಿಸಿದ್ದೇವೆ. ಆದರೆ ನಮಗೆ ಈ ತನಿಖಾ ತಂಡದ ಮೇಲೆ ಕಿಂಚಿತ್ತೂ ವಿಶ್ವಾಸವಿಲ್ಲ. ನ್ಯಾಯ ಸಿಗುತ್ತದೆ ಎಂಬ ಭರವಸೆಯೂ ಇಲ್ಲ. ಹಾಗಾಗಿ ನಾವು ಕಾನೂನು ಹೋರಾಟ ಮಾಡುತ್ತೇವೆ''.
-ಶಂಶೀರ್ ಅಲಿ, ಸಂತ್ರಸ್ತೆಯ ಚಿಕ್ಕಪ್ಪ
''ವೈದ್ಯರಿಂದ ಚಿಕಿತ್ಸೆ ನಿರಾಕರಣೆ ಆರೋಪಕ್ಕೆ ಸಂಬಂಧಿಸಿ ಬುಧವಾರ 15ಕ್ಕೂ ಅಧಿಕ ಮಂದಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ತನಿಖಾ ಪ್ರಕ್ರಿಯೆ ಮುಗಿದೊಡನೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು''.
-ಡಾ.ಕಿಶೋರ್ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ದ.ಕ.ಜಿಲ್ಲೆ







