ನೇಪಾಳ: ಸಚಿವ ಸಂಪುಟದ 20 ಸದಸ್ಯರನ್ನು ತೆಗೆದು ಹಾಕಿದ ಸುಪ್ರೀಂ ಕೋರ್ಟ್

photo: twitter/@nepalisansar4u
ಕಠ್ಮಂಡು (ನೇಪಾಳ), ಜೂ. 23: ನೇಪಾಳ ಸಚಿವ ಸಂಪುಟಕ್ಕೆ ಇತ್ತೀಚೆಗೆ ಸೇರ್ಪಡೆಗೊಳಿಸಲಾದ 20 ಸಚಿವರನ್ನು ತೆಗೆದು ಹಾಕುವ ಮೂಲಕ ದೇಶದ ಸುಪ್ರೀಂ ಕೋರ್ಟ್ ಪ್ರಧಾನಿ ಕೆ.ಪಿ. ಶರ್ಮ ಒಲಿಗೆ ಹೊಸ ಹೊಡೆತವೊಂದನ್ನು ನೀಡಿದೆ. ಅದೇ ವೇಳೆ, ಉಸ್ತುವಾರಿ ಪ್ರಧಾನಿಯೊಬ್ಬರು ಸಚಿವ ಸಂಪುಟದಲ್ಲಿ ಭಾರೀ ಪ್ರಮಾಣದಲ್ಲಿ ಬದಲಾವಣೆ ಮಾಡಬಹುದೇ ಎಂಬ ಪ್ರಶ್ನೆಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಕಾದಿರಿಸಿದೆ.
‘‘ಇದು ಮಧ್ಯಂತರ ಆದೇಶ. ನ್ಯಾಯಾಲಯವು ತನ್ನ ಅಂತಿಮ ತೀರ್ಪನ್ನು ಬಳಿಕ ನೀಡುವುದು’’ ಎಂದು ನ್ಯಾಯಾಲಯದ ಅಧಿಕಾರಿ ಭದ್ರಕಾಳಿ ಪೋಖರೆಲ್ ಬುಧವಾರ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.
ಇಬ್ಬರು ನ್ಯಾಯಾಧೀಶರನ್ನೊಳಗೊಂಡ ಪೀಠವು ಮಂಗಳವಾರ ತನ್ನ ತೀರ್ಪು ನೀಡಿದೆ.
ಪ್ರಧಾನಿ ಒಲಿಯ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಯುಎಮ್ಎಲ್)ದಲ್ಲಿ ಗುಂಪುಗಾರಿಕೆ ಕಾಣಿಸಿಕೊಂಡ ಬಳಿಕ, ಮೇ ತಿಂಗಳಲ್ಲಿ ಅವರು ಸಂಸತ್ತಿನಲ್ಲಿ ವಿಶ್ವಾಸಮತವನ್ನು ಕಳೆದುಕೊಂಡಿದ್ದರು.
ಆಗ ಸಂಸತನ್ನು ವಿಸರ್ಜಿಸಿದ ಒಲಿ, ನವೆಂಬರ್ನಲ್ಲಿ ಹೊಸದಾಗಿ ಚುನಾವಣೆ ನಡೆಸುವುದಾಗಿ ಘೋಷಿಸಿದ್ದರು. ಚುನಾವಣೆ ನಡೆಯುವವರೆಗೆ ಅವರು ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿದಿದ್ದಾರೆ.







