ಸೈಬರ್ ಅಪರಾಧ : ಪ್ರಕರಣ ದಾಖಲು
ಮಂಗಳೂರು, ಜೂ.23: ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಬುಧವಾರ ಸೈಬರ್ ಕ್ರೈಂ ಠಾಣೆಯಲ್ಲಿ ವಂಚನೆಯ ಪ್ರಕರಣ ದಾಖಲಾಗಿದೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ದ್ವಿಚಕ್ರ ವಾಹನ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿ ಬಳಿಕ ಹಂತ ಹಂತವಾಗಿ ಗೂಗಲ್ ಪೇ ಮೂಲಕ 51,300 ರೂ. ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಸೈನಿಕನೆಂದು ಪರಿಚಯಿಸಿಕೊಂಡ ಶ್ರೀನಿವಾಸ್ ಎಂಬಾತ ದ್ವಿಚಕ್ರ ವಾಹನ ಮಾರಾಟಕ್ಕಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಜೂ.21ರಂದು ಜಾಹೀರಾತು ಹಾಕಿದ್ದ. ಅದನ್ನು ಗಮನಿಸಿದ ಫಿರ್ಯಾದಿದಾರರು ಶ್ರೀನಿವಾಸ್ ಬಳಿ ಮಾತುಕತೆ ನಡೆಸಿದ್ದರು. ಹಾಗೇ 18 ಸಾವಿರ ರೂ.ಗೆ ಖರೀದಿ-ಮಾರಾಟದ ಒಪ್ಪಂದವೂ ನಡೆದಿತ್ತು. ಆ ಬಳಿಕ ಆರ್.ಸಿ. ವರ್ಗಾಯಿಸಲು ಮುಂಗಡವಾಗಿ 3 ಸಾವಿರ ರೂ. ಕೇಳಿದ್ದ ಆರೋಪಿ ಶ್ರೀನಿವಾಸ್ ಹಲವು ಬಾರಿ ಕರೆ ಮಾಡಿ ಹಂತ ಹಂತವಾಗಿ 51,300 ರೂ. ಪಡೆದು ವಂಚನೆ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ.
Next Story





