ಪಡುತೋನ್ಸೆಯಲ್ಲಿ ಅಕ್ರಮ ಮರಳುಗಾರಿಕೆಗೆ ದಾಳಿ: ನಾಲ್ಕು ದೋಣಿ ವಶ

ಉಡುಪಿ, ಜೂ.23: ಪಡುತೋನ್ಸೆ ಗ್ರಾಮದ ಕಂಬಳತೋಟ ಎಂಬಲ್ಲಿ ಸ್ವರ್ಣ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಮಂಗಳವಾರ ದಾಳಿ ನಡೆಸಿದ ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ನಾಲ್ಕು ದೋಣಿಗಳನ್ನು ವಶಪಡಿಸಿಕೊಂಡಿದೆ.
ಇರ್ಷಾದ್ ಎಂಬಾತ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಕುರಿತ ಬಂದ ಖಚಿತ ಮಾಹಿತಿಯಂತೆ ಇಲಾಖೆಯ ಭೂ ವಿಜ್ಞಾನಿ ಮಹೇಶ್ ನೇತೃತ್ವದಲ್ಲಿ ಗ್ರಾಮ ಲೆಕ್ಕಿಗ ಗಿರೀಶ್, ಮಲ್ಪೆ ಪೊಲೀಸರು ದಾಳಿ ನಡೆಸಿದ್ದು, ನಾಲ್ಕು ದೋಣಿ ಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಈ ದೋಣಿಗಳನ್ನು ನದಿಯಿಂದ ಕ್ರೈನ್ ಮೂಲಕ ಮೇಲಕ್ಕೆತ್ತಿ ಮಲ್ಪೆ ಠಾಣಾ ಆವರಣಕ್ಕೆ ಸ್ಥಳಾಂತರಿಸಲಾಗಿದೆ.
ಈ ಹಿಂದೆ ಕೂಡ ಇದೇ ರೀತಿ ಮರುಳುಗಾರಿಕೆ ನಡೆಸಿದಕ್ಕೆ ಆರೋಪಿಗೆ ದಂಡ ವಿಧಿಸಲಾಗಿತ್ತು. ಇದೇ ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ದಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆದರೂ ಅಕ್ರಮ ಮರಳುಗಾರಿಕೆ ನಿಲ್ಲಿಸದೆ ಉತ್ತರ ಪ್ರದೇಶದ ಕಾರ್ಮಿಕರನ್ನು ಬಳಸಿ ನಿರಂತರ ಅಕ್ರಮವಾಗಿ ಮರಳು ಮುಂದುವರೆಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.





