ಮೆಹುಲ್ ಚೋಕ್ಸಿ ಅಪಹರಣಕ್ಕೆ ನಿರ್ಣಾಯಕ ಪುರಾವೆಗಳಿಲ್ಲ: ಆಂಟಿಗುವಾ ಪ್ರಧಾನಿ

ಡೊಮಿನಿಕಾ, ಜೂ.23: ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಅಪಹರಿಸಿ ಡೊಮಿನಿಕಾಕ್ಕೆ ಕರೆದೊಯ್ಯಲಾಗಿತ್ತು ಎಂಬ ಬಗ್ಗೆ ನಿರ್ಣಾಯಕ ಪುರಾವೆಗಳಿರುವುದು ತನ್ನ ಗಮನಕ್ಕೆ ಬಂದಿಲ್ಲ ಎಂದು ಆಂಟಿಗುವಾ ಮತ್ತು ಬರ್ಬುಡಾ ಪ್ರಧಾನಿ ಗಾಸ್ಟನ್ ಬ್ರೋನ್ ಹೇಳಿದ್ದಾರೆ. ಚೋಕ್ಸಿಯನ್ನು ಅಪಹರಿಸಿ ಬಲವಂತವಾಗಿ ಡೊಮಿನಿಕಾಕ್ಕೆ ಕರೆದೊಯ್ಯಲಾಗಿದೆಯೇ ಎಂದು ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಸಂಸದರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಈ ಕುರಿತು ನಿರ್ಣಾಯಕ ಸಾಕ್ಷಿಗಳಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆದರೆ ಚೋಕ್ಸಿಯನ್ನು ಅಪಹರಿಸಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡುತ್ತಿರುವುದನ್ನು ಗಮನಿಸಲಾಗಿದೆ. ಚೋಕ್ಸಿಯನ್ನು ಡೊಮಿನಿಕಾಕ್ಕೆ ಅಪಹರಿಸಿದ ಪ್ರಕರಣದಲ್ಲಿ ಭಾರತೀಯ ಮೂಲದ ಕೆಲವರೂ ಭಾಗಿಯಾಗಿದ್ದಾರೆ ಎಂಬ ಬಗ್ಗೆ ವೀಡಿಯೊಗಳನ್ನು ಚೋಕ್ಸಿಯ ಕಾನೂನು ಸಲಹಾಗಾರರ ತಂಡ ಬಿಡುಗಡೆ ಮಾಡಿದೆ ಎಂದು ಆಂಟಿಗುವಾ ಸುದ್ಧಿಸಂಸ್ಥೆ ವರದಿ ಮಾಡಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಸ್ಕಾಟ್ಲ್ಯಾಂಡ್ ಯಾರ್ಡ್ ಅಥವಾ ಇತರ ಯಾವುದೇ ಏಜೆನ್ಸಿಗಳು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಇದೇ ವೇಳೆ ಗಾಸ್ಟನ್ ಬ್ರೋನ್ ಸ್ಪಷ್ಟಪಡಿಸಿದ್ದಾರೆ. ಆಂಟಿಗುವಾ ಮತ್ತು ಬರ್ಬುಡಾದಿಂದ ನಾಪತ್ತೆಯಾಗಿದ್ದ ಮೆಹುಲ್ ಚೋಕ್ಸಿಯನ್ನು ಮೇ 26ರಂದು ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು. ಚೋಕ್ಸಿ ಕ್ಯೂಬಾಕ್ಕೆ ಪರಾರಿಯಾಗುವ ಸಂಚು ಹೂಡಿದ್ದ ಎಂದು ವರದಿಯಾಗಿತ್ತು.
ಡೊಮಿನಿಕಾ ದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಚೋಕ್ಸಿ ಈಗ ಆ ದೇಶದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,000 ಕೋಟಿ ರೂ. ಮರುಪಾವತಿಸದೆ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಚೋಕ್ಸಿ ಬಂಧನಕ್ಕೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಯತ್ನಿಸುತ್ತಿದೆ.







