ಸ್ಥಳೀಯರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲು ನಿರಾಕರಿಸಿದ ಎಂಆರ್‌ಪಿಎಲ್: ಡಿವೈಎಫ್‌ಐ ಆರೋಪ
ಮಂಗಳೂರು, ಜೂ.23: ಕೊರೋನ ಕಾಲಘಟ್ಟದಲ್ಲಿ ಎಲ್ಲಾ ಉದ್ಯಮಗಳು, ಕೈಗಾರಿಕೆಗಳ ಕಾರ್ಯಾಚರಣೆ ಕುಂಠಿತ ಗೊಂಡಿರುವಾಗ ಅಗತ್ಯ ವಸ್ತುಗಳಡಿಯಲ್ಲಿ ಬರುವ ಎಂಆರ್‌ಪಿಎಲ್ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸುತ್ತಿದೆ. ಆದರೆ ಸ್ಥಳೀಯ ಗ್ರಾಪಂ ಆಡಳಿತಗಳು ಲಾಕ್‌ಡೌನ್ ಸಂತ್ರಸ್ಥ ಗ್ರಾಮಸ್ಥರಿಗೆ ಸಿಎಸ್‌ಆರ್ ನಿಧಿಯಡಿ ಆಹಾರ ಸಾಮಾಗ್ರಿಗಳ ಕಿಟ್ ಒದಗಿಸುವಂತೆ ಮನವಿ ಸಲ್ಲಿಸಿದ್ದರೂ ಈ ಕುರಿತು ಉತ್ತರಿಸುವ ಸೌಜನ್ಯವನ್ನೂ ತೋರಿಸಿಲ್ಲ. ಅಲ್ಲದೆ ಎಂಆರ್‌ಪಿಎಲ್ ಕಂಪೆನಿಯ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಶುಲ್ಕ ಪಾವತಿಸಲು ಹೆತ್ತವರು ಅಸಮರ್ಥರಾಗಿದ್ದಾರೆ. ಆದರೆ ಈ ಶಾಲೆಗಳಲ್ಲಿ ಶುಲ್ಕವನ್ನು ಹೆಚ್ಚಿಸಿ ಅನ್ಯಾಯ ಮಾಡಲಾಗಿದೆ ಎಂದು ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಂ.ವೆಂಕಟೇಶ್‌ಗೆ ಬರೆದ ಪತ್ರದಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಸಾರ್ವಜನಿಕ ರಂಗದ ಕಂಪೆನಿಯು ಈ ರೀತಿ ಬೇಜವಾಬ್ದಾರಿತನದಿಂದ ನಡೆದುಕೊಳ್ಳಲು ಹೇಗೆ ಸಾಧ್ಯ? ಸ್ಥಳೀಯರ ಜಮೀನು, ನೀರು ಪಡೆದು ಕಾರ್ಯಾಚರಿಸುವ, ವರ್ಷಕ್ಕೆ ಲಕ್ಷ ಕೋಟಿ ವ್ಯವಹಾರ ನಡೆಸುವ ಬೃಹತ್ ಕಂಪೆನಿ ತಾನು ನಡೆಸುವ ಪ್ರಾಥಮಿಕ ಶಾಲೆಗಳಲ್ಲಿ ಸ್ಥಳೀಯರಿಗೆ ಉಚಿತ ಶಿಕ್ಷಣ ನೀಡಬೇಕಿತ್ತು. ಆದರೆ ಕೊರೋನ ಕಾಲದಲ್ಲೂ 35 ಸಾವಿರ ರೂ. ದುಬಾರಿ ಶುಲ್ಕವನ್ನು ಪಡೆಯಲಾಗುತ್ತದೆ. ಸದ್ಯ ಶಾಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಠಗಳು ನಡೆಸಲು ಸಾಧ್ಯವಿಲ್ಲ. ಆದಾಗ್ಯೂ ಎಂಆರ್‌ಪಿಎಲ್ ಕಂಪೆನಿಯ ಶಾಲೆಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ 20 ಸಾವಿರ ರೂ. ಶುಲ್ಕ ಹೆಚ್ಚಿಸಿರುವುದು ಎಷ್ಟು ಸರಿ?. ಯಾವ ಶಾಲಾ ಕಾಲೇಜುಗಳಲ್ಲೂ ಯಾವುದೇ ಕಾರಣಕ್ಕೂ ಶುಲ್ಕಗಳನ್ನು ಹೆಚ್ಚಿಸಬಾರದು, ಶುಲ್ಕ ಪಾವತಿಸಲು ಬಲವಂತ ಪಡಿಸಬಾರದು ಎಂದು ಸರಕಾರ ಆದೇಶ ಹೊರಡಿಸಿರುವಾಗ ಎಂಆರ್‌ಪಿಎಲ್ ನೆಲದ ಕಾನೂನಿಗೆ ಗೌರವ ನೀಡದಿರುವುದು ಅಕ್ಷಮ್ಯ ಎಂದು ಮುನೀರ್ ಕಾಟಿಪಳ್ಳ ಪತ್ರದಲ್ಲಿ ತಿಳಿಸಿದ್ದಾರೆ.
ಈಗ ಹೆಚ್ಚಳ ಮಾಡಿರುವ 20 ಸಾವಿರ ರೂ.ಗಳನ್ನು ಪೂರ್ತಿ ಕೈಬಿಡಬೇಕು. ಕೊರೋನ ಸಂಕಷ್ಟಕ್ಕೊಳಗಾಗಿರುವ ಸುತ್ತಲ ಗ್ರಾಮದ ಪೋಷಕರ ಕಷ್ಟಗಳನ್ನು ಪರಿಗಣಿಸಿ 35 ಸಾವಿರ ರೂ. ಶುಲ್ಕದಲ್ಲಿ ಸಾಧ್ಯವಾದಷ್ಟು ಕಡಿತ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.







