ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವೆಲ್ಫೇರ್ ಪಾರ್ಟಿಯಿಂದ ಪ್ರತಿಭಟನೆ

ಉಳ್ಳಾಲ: ಅಚ್ಚೆ ದಿನ್ ನೀಡುತ್ತೇನೆ ಎಂಬ ಆಶ್ವಾಸನೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಮೋದಿ ಸರಕಾರ ಇಂದು ಪ್ರತಿದಿನವೆಂಬಂತೆ ಹಂತ ಹಂತವಾಗಿ ತೈಲ ಬೆಲೆಯೇರಿಕೆ ಮಾಡುತ್ತಿದೆ. ಅದರ ಬೆನ್ನಲ್ಲೇ ರಾಜ್ಯ ಸರಕಾರ ವಿದ್ಯುತ್ ದರ ಏರಿಕೆಯನ್ನೂ ಮಾಡಿ ಬಡಜನರ ಗಾಯದ ಮೇಲೆ ಬರೆ ಎಳೆದಿದೆ ಎಂದು ವೆಲ್ಫೇರ್ ಪಾರ್ಟಿಯ ದ.ಕ ಜಿಲ್ಲಾ ಸಮಿತಿ ಸದಸ್ಯ ತೌಸೀಫ್ ಉಳ್ಳಾಲ ಆರೋಪಿಸಿದರು.
ಅವರು ವೆಲ್ಪೇರ್ ಪಾರ್ಟಿ ದ.ಕ ವತಿಯಿಂದ ಜಿಲ್ಲಾದ್ಯಂತ ಇಂಧನ ದರ ಏರಿಕೆ ಖಂಡಿಸಿ ತೊಕ್ಕೋಟುವಿನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ತೈಲ ಮತ್ತು ವಿದ್ಯುತ್, ದರ ಏರಿಕೆಯಿಂದಾಗಿ ಪ್ರಯಾಣ ಹಾಗೂ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಸಹಜವಾಗಿಯೇ ಹೆಚ್ಚಳವಾಗಿದೆ. ಇವೆಲ್ಲವುಗಳನ್ನೂ ಭಿನ್ನವಿಸಿಕೊಳ್ಳಲು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಬೇಕಾದ ಜನ ಪ್ರತಿನಿಧಿಗಳೂ ಅಲಭ್ಯವಾಗಿದ್ದಾರೆ. ಸರ್ಕಾರ ಕೂಡಲೇ ಬೆಲೆಯೇರಿಕೆಯನ್ನು ಹಿಂಪಡೆದು ಆಡಳಿತದಲ್ಲಿ ಜನಹಿತ ನೀತಿಯನ್ನು ಅಳವಡಿಸಿಕೊಳ್ಳ ಬೇಕೆಂದು ಪಕ್ಷದ ಜೊತೆ ಕಾರ್ಯದರ್ಶಿ ಫಾರೂಕ್ ಅಳೇಕಲ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಹಮ್ಮದ್ ಕೈಫ್, ಮಜೀದ್ ಬೆಂಗರೆ, ಅಸ್ಗರ್ ಸಿ.ಎಚ್ ಹಾಗು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.







