ಬರಗಾಲದ ಅಪಾಯಲ್ಲಿ 43 ದೇಶದ 41 ಮಿಲಿಯನ್ ಜನತೆ: ವಿಶ್ವಸಂಸ್ಥೆ ವರದಿ

ವಿಶ್ವಸಂಸ್ಥೆ, ಜೂ.23: 43 ದೇಶದ ಸುಮಾರು 41 ಮಿಲಿಯನ್ ಜನತೆ ಬರಗಾಲದ ಅಪಾಯದಲ್ಲಿದ್ದು, ಇತರ 4 ದೇಶಗಳ ಸುಮಾರು 60 ಲಕ್ಷ ಜನತೆ ಈಗಾಗಲೇ ಬರಗಾಲದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯ ಹೇಳಿಕೆ ಎಚ್ಚರಿಸಿದೆ.
ಹವಾಮಾನ ಬದಲಾವಣೆ ಮತ್ತು ಆರ್ಥಿಕ ಆಘಾತಗಳು ಹಸಿವಿನಿಂದ ಬಳಲುವವರ ಪ್ರಮಾಣ ಹೆಚ್ಚಲು ಕಾರಣವಾಗಿದ್ದರೆ, ಅಗತ್ಯ ವಸ್ತುಗಳ ಬೆಲೆಯೇರಿಕೆ ಆಹಾರ ಭದ್ರತೆಯ ಮೇಲಿನ ಒತ್ತಡ ಹೆಚ್ಚಲು ಕಾರಣವಾಗಿದೆ ಎಂದು ಮಂಗಳವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
2021ರಲ್ಲಿ ನಮಗೆ ಎದುರಾಗಲಿರುವ ಪರಿಸ್ಥಿತಿಯ ಬಗ್ಗೆ ಆತಂಕಿತನಾಗಿದ್ದೇನೆ. ಈಗ ಕ್ಷಾಮದ ರೀತಿಯ ಪರಿಸ್ಥಿತಿ 4 ದೇಶಗಳಲ್ಲಿದೆ. ಈ ಮಧ್ಯೆ 41 ಮಿಲಿಯನ್ ಜನತೆ ಬರಗಾಲದ ಬಾಗಿಲು ಬಡಿಯುತ್ತಿದ್ದಾರೆ ಎಂದು ವಿಶ್ವ ಆಹಾರ ಯೋಜನೆ(ಡಬ್ಲ್ಯೂಇಎಫ್)ಯ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬೆಸ್ಲೆ ಹೇಳಿದ್ದಾರೆ. ಇಥಿಯೋಪಿಯಾ, ದಕ್ಷಿಣ ಸುಡಾನ್, ಮಡಗಾಸ್ಕರ್ ಮತ್ತು ಯೆಮೆನ್ನಲ್ಲಿ ಈ ವರ್ಷ ಬರಗಾಲದಂತಹ ಪರಿಸ್ಥಿತಿಯಿದೆ.
ನೈಜೀರಿಯಾ ಮತ್ತು ಬುರ್ಕಿನಾ ಫಾಸೊದಲ್ಲೂ ಬರಗಾಲದ ಛಾಯೆ ಆವರಿಸಿದೆ. ಆದರೆ ಸಾವಿನ ಪ್ರಮಾಣದ ಬಗ್ಗೆ ಚರ್ಚೆ ನಡೆಸುವುದು ಸರಿಯಲ್ಲ. ಯಾಕೆಂದರೆ ಸೊಮಾಲಿಯಾದಲ್ಲಿ 2011ರಲ್ಲಿ ಕಂಡುಬಂದ ಭೀಕರ ಕ್ಷಾಮದ ಸಂದರ್ಭ, ಬರಗಾಲದ ಘೋಷಣೆಗೂ ಮುನ್ನ ದೇಶದಲ್ಲಿ ಸುಮಾರು 13 ಲಕ್ಷ ಜನತೆ ಸಾವಿಗೀಡಾಗಿದ್ದರು, ಇವರಲ್ಲಿ ಅರ್ಧಾಂಶದಷ್ಟು ಜನ ಹಸಿವಿನಿಂದ ಪ್ರಾಣ ಕಳೆದುಕೊಂಡಿದ್ದರು ಎಂದು ಬೆಸ್ಲೆ ಹೇಳಿದ್ದಾರೆ.
ಬರಗಾಲದ ಅಪಾಯದಲ್ಲಿರುವ 43 ದೇಶಗಳಿಗೆ ನೆರವಾಗಲು ತಕ್ಷಣವೇ 6 ಬಿಲಿಯನ್ ಡಾಲರ್ ಮೊತ್ತದ ಅಗತ್ಯವಿದೆ ಎಂದು ಸ್ವಯಂಪ್ರೇರಿತ ದೇಣಿಗೆಯಿಂದ ಕಾರ್ಯನಿರ್ವಹಿಸುವ ಡಬ್ಯೂಇಎಫ್ ಹೇಳಿದೆ. ಸಂಘರ್ಷ ಹಾಗೂ ಹವಾಮಾನ ಬದಲಾವಣೆಯಿಂದಾಗಿ 2016ರಿಂದ ವಿಶ್ವದಲ್ಲಿ ಹಸಿವಿನಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ. 2019ರಲ್ಲಿ 27 ಮಿಲಿಯನ್ ಜನತೆ ಬರಗಾಲದ ಅಪಾಯದಲ್ಲಿದ್ದರೆ, 2020ರಲ್ಲಿ ಕೊರೋನ ಸೋಂಕಿನ ಸಮಸ್ಯೆ ಈ ಬಿಕ್ಕಟ್ಟಿಗೆ ತನ್ನ ಪಾಲನ್ನು ನೀಡಿದೆ . ವಿಶ್ವದ ಜನಸಂಖ್ಯೆಯ ಸುಮಾರು 9% ಜನತೆ, ಅಂದರೆ ಸುಮಾರು 690 ಮಿಲಿಯನ್ ಜನ ಪ್ರತೀ ದಿನ ರಾತ್ರಿ ಉಪವಾಸ ಮಲಗುವ ಸ್ಥಿತಿಯಿದೆ ಎಂದು ಡಬ್ಲ್ಯೂಇಎಫ್ ಹೇಳಿದೆ. ಡಬ್ಲ್ಯೂಇಎಫ್ಗೆ ಕಳೆದ ವರ್ಷ ನೋಬೆಲ್ ಶಾಂತಿ ಪುರಸ್ಕಾರ ನೀಡಲಾಗಿದೆ.
ಆಹಾರ ಬೆಲೆಯೇರಿಕೆ
ಜಾಗತಿಕ ಮಟ್ಟದಲ್ಲಿ ಕಳೆದ ಮೇ ತಿಂಗಳಿನಲ್ಲಿ ಆಹಾರದ ಬೆಲೆಗಳು ಕಳೆದೊಂದು ದಶಕದಲ್ಲೇ ಅತ್ಯಧಿಕ ಮಟ್ಟಕ್ಕೇರಿದೆ. ಧಾನ್ಯಗಳು, ಎಣ್ಣೆಕಾಳುಗಳು, ಡೈರಿ ಉತ್ಪನ್ನಗಳು, ಮಾಂಸ ಮತ್ತು ಸಕ್ಕರೆಯ ಒಟ್ಟು ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ 40% ಏರಿಕೆಯಾಗಿದೆ. ಮೆಕ್ಕೆಜೋಳದ ದರ ಕಳೆದ ವರ್ಷಕ್ಕಿಂತ ಸುಮಾರು 90% ಹೆಚ್ಚಿದ್ದರೆ ಗೋಧಿಯ ಬೆಲೆ ಕಳೆದ ವರ್ಷಕ್ಕಿಂತ ಸುಮಾರು 30% ಹೆಚ್ಚಿದೆ. ಲೆಬನಾನ್, ನೈಜೀರಿಯಾ, ಸುಡಾನ್, ವೆನೆಝುವೆಲಾ ಮತ್ತು ಝಿಂಬಾಬ್ವೆಯಲ್ಲಿ ಕರೆನ್ಸಿ ಅಪಮೌಲ್ಯವು ಆಹಾರದ ಬೆಲೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಆಹಾರ ಭದ್ರತೆಗೆ ಅಪಾಯ ತಂದಿದೆ ಎಂದು ಡಬ್ಲ್ಯೂಇಎಫ್ ಹೇಳಿದೆ.







