ಕೋವಿಡ್ ಭೀತಿ: ಶೇ.76ರಷ್ಟು ಪಾಲಕರಿಗೆ ಸದ್ಯಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಮನಸ್ಸಿಲ್ಲ: ಸಮೀಕ್ಷಾ ವರದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜು.24: ದೇಶಾದ್ಯಂತ ವಿವಿಧ ರಾಜ್ಯಗಳು ಕೋವಿಡ್ ನಿರ್ಬಂಧಗಳನ್ನು ನಿಧಾನವಾಗಿ ಸಡಿಲಗೊಳಿಸುತ್ತಿದ್ದು, ಅಂಗಡಿ, ಶಾಪಿಂಗ್ಮಾಲ್ಗಳು, ಮನರಂಜನಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಆದಾಗ್ಯೂ ಶೇ.76ರಷ್ಟು ಪಾಲಕರು ಈಗಲೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆಂದು ನೂತನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ, ಕೊರೋನ ಸೋಂಕಿನ ಎರಡನೆ ಅಲೆಯ ತೀವ್ರ ಸ್ವರೂಪ ಹಾಗೂ ವೈರಸ್ನ ನೂತನ ಪ್ರಭೇದಗಳಿಂದ ಮಕ್ಕಳು ಹೆಚ್ಚು ಬಾಧಿತರಾಗುತ್ತಿರುವುದರಿಂದ ಆತಂಕಗೊಂಡಿರುವುದೇ ಇದಕ್ಕೆ ಕಾರಣವೆಂದು ಅದು ಹೇಳಿದೆ.
ಸಾಮುದಾಯಿಕ ಸಾಮಾಜಿಕ ಜಾಲತಾಣ ವೇದಿಕೆ ಲೋಕಲ್ ಸರ್ಕಲ್ಸ್ ಈ ಸಮೀಕ್ಷೆಯನ್ನು ನಡೆಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ 8227 ಪಾಲಕರು ತಮ್ಮ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಶೂನ್ಯಮಟ್ಟಕ್ಕೆ ತಲುಪುವವರೆಗೆ ಅಥವಾ ಮಕ್ಕಳು ಲಸಿಕೀಕರಣವಾಗುವವರೆಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಇಚ್ಛಿಸುತ್ತಿಲ್ಲವೆಂದು ಅದು ಹೇಳಿದೆ.
ಮೇ 25ರಿಂದ ಜೂನ್ 15ರವರೆಗೆ ನಡೆಸಲಾಗಿದ್ದ ಈ ಸಮೀಕ್ಷೆಯ ಫಲಿತಾಂಶವನ್ನು ಬುಧವಾರ ಬಿಡುಗಡೆಗೊಳಿಸಲಾಗಿದೆ. ಕರ್ನಾಟಕ, ಉತ್ತರಪ್ರದೇಶ, ಬಿಹಾರ, ತಮಿಳುನಾಡು, ಕೇರಳ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ 23 ರಾಜ್ಯಗಳ 293 ಜಿಲ್ಲೆಗಳ ಸುಮಾರು 19 ಸಾವಿರ ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 49ರಷ್ಟು ಪಾಲಕರು 1ನೇ ಸ್ತರದ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಶೇ.29ರಷ್ಟು ಮಂದಿ 2ನೇ ಸ್ತರ ಹಗಾಗೂ ಶೇ.22 ಮಂದಿ 3 ಹಾಗೂ 4ನೇ ಸ್ತರದ ಜಿಲ್ಲೆಗಳವರಾಗಿದ್ದಾರೆ.
ಶೇ.69ರಷ್ಟು ಮಂದಿ ಮಕ್ಕಳಿಗೆ ಕೋವಿಡ್ ಲಸಿಕೆ ಲಭ್ಯವಾಗುವುದಾದರೆ ಅದು 2021ರ ಸೆಪ್ಟೆಂಬರ್ನೊಳಗೆೆ ದೊರೆಯುವಂತಾಗಬೇಕೆಂದು ಅವರು ಬಯಸಿದ್ದಾರೆ. ಉಳಿದವರಲ್ಲಿ ಶೇ.21ರಷ್ಟು ಮಂದಿ ಡಿಸೆಂಬರ್ 21ರೊಳಗೆ ಕಾಯಲು ಬಯಸಿದ್ದಾರೆ. ಆದರೆ ಶೇ.8ರಷ್ಟು ಪಾಲಕರು 2021ರಲ್ಲಿ ತಾವು ತಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದಿಲ್ಲವೆಂದು ಹೇಳಿದ್ದಾರೆ. ಆದರೆ ಅವರು ತಮ್ಮ ಮಕ್ಕಳಿಗೆ ಲಸಿಕೆ ಹಾಕಲು ಯಾಕೆ ಹಿಂಜರಿಯುತ್ತಿದ್ದಾರೆಂಬ ಬಗ್ಗೆ ಸಮೀಕ್ಷೆಯಲ್ಲಿ ತಿಳಿಸಲಾಗಿಲ್ಲ.







