ಅಸಂಸದೀಯ ಪದ ಬಳಕೆ: ಮೇನಕಾ ವಿರುದ್ಧ ಪಶುವೈದ್ಯರಿಂದ ರಾಷ್ಟ್ಟ್ರವ್ಯಾಪಿ ಪ್ರತಿಭಟನೆ

ಹೊಸದಿಲ್ಲಿ,ಜು.24: ಬಿಜೆಪಿ ಸಂಸದೆ ಹಾಗೂ ಪ್ರಾಣಿಹಕ್ಕುಗಳ ಹೋರಾಟಗಾರ್ತಿ ಮೇನಕಾಗಾಂಧಿ ಪಶುವೈದ್ಯರೊಬ್ಬರನ್ನು ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡ ಸಂದರ್ಭ ಅಸಂಸದೀಯ ಪದವನ್ನು ಬಳಸಿ ನಿಂದಿಸಿದ್ದಾರೆಂದು ಆರೋಪಿಸಿ ದೇಶಾದ್ಯಂತ ಪಶುವೈದ್ಯರು ಬುಧವಾರ ಕಪ್ಪುಪಟ್ಟಿಧರಿಸಿ ಪ್ರತಿಭಟನೆ ನಡೆಸಿದರು. ಭಾರತೀಯ ಪಶುವೈದ್ಯ ಸಂಘ (ಐವಿಎ)ವು ಬುಧವಾರ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು.
ಮೇನಕಾ ಗಾಂಧಿ ಅವರು ದೂರವಾಣಿಯಲ್ಲಿ ಕರೆ ಮಾಡಿ,ಪಶುವೈದ್ಯರನ್ನು ಅಸಂಸದೀಯ ಪದಗಳಲ್ಲಿ ನಿಂದಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೋರಿ ಐವಿಎ ಲೋಕಸಭಾ ಸ್ಪೀಕರ್ ಓ.ಪಿ.ಬಿರ್ಲಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವುದಾಗಿ ಭಾರತೀಯ ಪಶುವೈದ್ಯ ಸಂಘದ ಅಧ್ಯಕ್ಷ ಉಮೇಶ್ ಶರ್ಮಾ ಅವರು ತಿಳಿಸಿದ್ದಾರೆ.
ಬಿಜೆಪಿ ಸಂಸದೆಯಾದ ಮೇನಕಾ ಗಾಂಧಿ ಕೂಡಲೇ ತನ್ನ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಕೋವಿಡ್19 ಬಿಕ್ಕಟ್ಟಿನ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವಾಗ 150ಕ್ಕೂ ಅಧಿಕ ಪಶುವೈದ್ಯರು ಹಾಗೂ 1 ಸಾವಿರ ಮಂದಿ ಅರೆ ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದಾರೆಂದು ಶರ್ಮಾ ತಿಳಿಸಿದರು.





