ಸೇತುವೆ ನಿರ್ಮಾಣವಾಗಲಿ
ಮಾನ್ಯರೇ,
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ವಾರ್ಡ್ ನಂ.4ರ ಹೂರ ವಲಯದಲ್ಲಿರುವ ಹೊಲಗಳಿಗೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದು, ರೈತರು ಪರದಾಡುವಂತಾಗಿದೆ. ಮಳೆ ಬಂದಾಗ ಇಲ್ಲಿನ ಹಳ್ಳ ತುಂಬಿ ಹರಿಯುವ ಕಾರಣ ರಸ್ತೆಯ ಮೇಲೆ ನೀರು ಹರಿದು ಸಂಪರ್ಕ ಕಡಿತಗೊಳ್ಳುತ್ತಿದೆ. ಅಲ್ಲದೆ ಚರಂಡಿಯಲ್ಲಿರುವ ಕೊಳಚೆ ನೀರು ಸಹ ರಸ್ತೆಯ ಮುಖಾಂತರ ಹಾದುಹೋಗುತ್ತಿದೆ. ಮಳೆಗಾಲ ಬಂದಾಗ ಈ ರಸ್ತೆ ಮೂಲಕ ಹಾದುಹೋಗಲು ತೀವ್ರ ತೊಂದರೆ ಎದುರಾಗುತ್ತಿದೆ. ವಾಹನ ಸವಾರರು ಸಾಕಷ್ಟು ಬಾರಿ ಆಯತಪ್ಪಿಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇದರ ಜತೆ ರೈತರಿಗೆ ಹಳ್ಳ ದಾಟುವ ಸಮಯದಲ್ಲಿ ಹಾವು, ಚೇಳಿನ ಕಾಟವೂ ಹೆಚ್ಚಾಗಿದೆ. ಪ್ರತಿ ವರ್ಷ ಮಳೆಗಾಲ ಮುಗಿಯುವ ತನಕ ನಿತ್ಯ ರಸ್ತೆ ದಾಟುವುದು ದೊಡ್ಡ ಸಮಸ್ಯೆಯಾಗಿದೆ. ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ತೆರಳಲೂ ಸಾಧ್ಯವಾಗುತ್ತಿಲ್ಲ. ಈ ಕುರಿತು ಶಾಸಕರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ರೈತರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ಇಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.





