ಎರಡು ವಾರಗಳಲ್ಲಿ 3ನೇ ಬಾರಿ ಶರದ್ ಪವಾರ್ ಅವರನ್ನು ಭೇಟಿಯಾದ ಪ್ರಶಾಂತ್ ಕಿಶೋರ್

ಹೊಸದಿಲ್ಲಿ, ಜೂ. 23: ಎಂಟು ವಿಪಕ್ಷಗಳ ನಾಯಕರು ಶರದ್ ಪವಾರ್ ಅವರ ದಿಲ್ಲಿಯಲ್ಲಿರುವ ನಿವಾಸದಲ್ಲಿ ಸಭೆ ಸೇರಿದ ಹಾಗೂ ದೇಶ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ ಒಂದು ದಿನದ ಬಳಿಕ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಬುಧವಾರ ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರನ್ನು ಬೇಟಿಯಾಗಿದ್ದಾರೆ. ಹೊಸದಿಲ್ಲಿಯಲ್ಲಿರುವ ಶರದ್ ಪವಾರ್ ಅವರ ನಿವಾಸದಲ್ಲಿ ನಡೆದ ಕಿಶೋರ್ ಹಾಗೂ ಪವಾರ್ ಅವರ ರಹಸ್ಯ ಮಾತುಕತೆ ಗಂಟೆಗಳ ಕಾಲ ನಡೆದಿದೆ.
ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜಯಬೇರಿ ಬಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ಅವರು ಜೂನ್ 11ರಂದು ಕೂಡ ಶರದ್ ಪವಾರ್ ಅವರ ಮುಂಬೈ ನಿವಾಸದಲ್ಲಿ ಪವಾರ್ ಅವರನ್ನು ಭೇಟಿಯಾಗಿದ್ದರು. ಸೋಮವಾರ ಕೂಡ ಶರದ್ ಪವಾರ್ ಅವರ ದಿಲ್ಲಿ ನಿವಾಸದಲ್ಲಿ ಪವಾರ್ ಅವರನ್ನು ಭೇಟಿಯಾಗಿದ್ದರು. ಇಂದು ಅವರು ಶರದ್ ಪವಾರ್ ಅವರನ್ನು ಮೂರನೇ ಬಾರಿ ಭೇಟಿಯಾಗಿದ್ದಾರೆ. ಶರದ್ ಪವಾರ್ ಅವರೊಂದಿಗಿನ ಈ ಭೇಟಿಗಳು ಬಿಜೆಪಿ ವಿರುದ್ಧ ತೃತೀಯ ರಂಗ ರೂಪಿಸಲು ವಿಪಕ್ಷಗಳು ಸಂಘಟಿತವಾಗುತ್ತಿದೆ ಎಂಬ ವದಂತಿ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.





