ದೇಶದಲ್ಲಿ ಸುಮಾರು 40 ಡೆಲ್ಟಾ ಪ್ಲಸ್ ಕೊರೋನ ವೈರಸ್ ಪ್ರಕರಣಗಳು ಪತ್ತೆ: ಆರೋಗ್ಯ ಸಚಿವಾಲಯ

ಹೊಸದಿಲ್ಲಿ, ಜೂ. 23: ಆತಂಕಕಾರಿ ಪ್ರಬೇಧ (ವಿಒಸಿ) ಎಂದು ವರ್ಗೀಕರಿಸಲಾದ ಸುಮಾರು 40 ಡೆಲ್ಟಾ ಪ್ಲಸ್ ಪ್ರಬೇಧದ ಕೊರೋನ ವೈರಸ್ ಪ್ರಕರಣಗಳು ಮಹಾರಾಷ್ಟ್ರ, ಕೇರಳ ಹಾಗೂ ಮಧ್ಯಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ. ಭಾರತದಲ್ಲಿ ಈಗ ಪರೀಕ್ಷೆಗೆ ಒಳಪಡಿಸಲಾದ (45,000 ಪ್ಲಸ್) ಮಾದರಿಗಳಲ್ಲಿ ಮಹಾರಾಷ್ಟ್ರ, ಕೇರಳ ಹಾಗೂ ಮಧ್ಯಪ್ರದೇಶಗಳಲ್ಲಿ ಇದುವರೆಗೆ ಸುಮಾರು 40 ಪ್ರಕರಣಗಳು ಅನಿಯಮಿತವಾಗಿ ಕಂಡು ಬಂದಿದೆ. ಆದರೆ, ಹರಡುವಿಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿಲ್ಲ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಡೆಲ್ಟಾ ಕೊರೋನ ವೈರಸ್ನ ರೂಪಾಂತರಿ ಪ್ರಬೇಧವಾದ ಡೆಲ್ಟಾ ಪ್ಲಸ್ ಕೊರೋನ ವೈರಸ್ ಈ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 6, ಕೇರಳದಲ್ಲಿ 3 ತಮಿಳುನಾಡಿನಲ್ಲಿ 3, ಕರ್ನಾಟಕದಲ್ಲಿ 2, ಪಂಜಾಬ್, ಆಂಧ್ರಪ್ರದೇಶ ಹಾಗೂ ಜಮ್ಮುವಿನಲ್ಲಿ ತಲಾ 1 ಡೆಲ್ಟಾ ಪ್ಲಸ್ ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ, ಕೇರಳ ಹಾಗೂ ಮಧ್ಯಪ್ರದೇಶ-ಈ ಮೂರು ರಾಜ್ಯಗಳಿಗೆ ನಿಗಾ ಸುದೃಢಗೊಳಿಸಲು ಹಾಗೂ ಸೂಕ್ತ ಸಾರ್ವಜನಿಕ ಆರೋಗ್ಯದ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರಕಾರ ಸಲಹೆ ನೀಡಿದೆ. ಕೇಂದ್ರ ಸರಕಾರ ಸ್ಥಾಪಿಸಿದ 28 ಲ್ಯಾಬ್ ಗಳ ಭಾರತೀಯ ಒಕ್ಕೂಟವಾಗಿರುವ ಐಎನ್ಎಸ್ಎಸಿಒಜಿ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿರುವ ಕೊರೋನ ವೈರಸ್ನ ಜೆನೋಮ್ ಸೀಕ್ವೆನ್ಸ್ನ ಅಧ್ಯಯನ ನಡೆಸುತ್ತಿದೆ. ಈ ಐಎನ್ಎಸ್ಎಸಿಒಜಿ ಇತ್ತೀಚೆಗೆ ವೈರಸ್ನ ಪ್ರಬೇಧ (ಡೆಲ್ಟಾ, ಬಿ.1.617.2) ಅನ್ನು ಗುರುತಿಸಿತ್ತು.
‘‘ಡೆಲ್ಟಾ ಪ್ಲಸ್ನ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಪ್ರಸ್ತುತ ಈ ಡೆಲ್ಟಾ ಪ್ಲಸ್ ಪ್ರಬೇಧದ ಸಂಖ್ಯೆ ಭಾರತದಲ್ಲಿ ತುಂಬಾ ಕಡಿಮೆ ಇದೆ. ಆದರೆ, ಕಳೆದ ಎರಡು ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿ ಪತ್ತೆಯಾಗಿರುವುದು ಈ ಪ್ರಬೇಧ ಕೆಲವು ರಾಜ್ಯಗಳಲ್ಲಿ ಈಗಾಗಲೇ ಇತ್ತು ಎಂಬುದನ್ನು ಸೂಚಿಸಿದೆ. ನಿಗಾ, ಪರೀಕ್ಷೆಯ ಹೆಚ್ಚಳ, ತ್ವರಿತ ಸಂಪರ್ಕ ಪತ್ತೆ ಹಾಗೂ ಲಸಿಕೀಕರಣಕ್ಕೆ ಗಮನ ಹರಿಸುವ ಮೂಲಕ ಈ ರಾಜ್ಯಗಳು ತಮ್ಮ ಸಾರ್ವಜನಿಕ ಆರೋಗ್ಯವನ್ನು ವರ್ಧಿಸುವ ಅಗತ್ಯತೆ ಇದೆ ಎಂದು ಅದು ಹೇಳಿದೆ.







