ಪಾಕಿಸ್ತಾನದಿಂದ ಉಗ್ರರಿಗೆ ಪಿಂಚಣಿ ವಿಶ್ವಸಂಸ್ಥೆಯಲ್ಲಿ ಭಾರತದ ಹೇಳಿಕೆ

ವಿಶ್ವಸಂಸ್ಥೆ, ಜೂ.23: ಪಾಕಿಸ್ತಾನವು ಉಗ್ರವಾದಿಗಳಿಗೆ ಹಣಕಾಸಿನ ನೆರವು ನೀಡುವುದನ್ನು ಮತ್ತು ತಮ್ಮ ನೆಲದಲ್ಲಿ ಆಶ್ರಯ ಒದಗಿಸುವುದನ್ನು ಮುಂದುವರಿಸಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ. ಭಯೋತ್ಪಾದಕರ ಕೃತ್ಯವು ಮಾನವ ಹಕ್ಕು ಉಲ್ಲಂಘನೆಯ ಗಂಭೀರ ಉಪಕ್ರಮವಾಗಿದ್ದು ಇದನ್ನು ಕಠಿಣ ಕ್ರಮಗಳಿಂದ ನಿಗ್ರಹಿಸಬೇಕಾಗಿದೆ.
ಭಯೋತ್ಪಾದಕ ಕೃತ್ಯಗಳಿಗೆ ನೆರವಾಗುತ್ತಿರುವುದರ ಜೊತೆಗೆ ಭಯೋತ್ಪಾದನೆ ಪ್ರಚೋದನೆ ನೀಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಹೊಣೆಯನ್ನಾಗಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಆಯೋಗದ ಪ್ರಥಮ ಕಾರ್ಯದರ್ಶಿ ಪವನ್ಕುಮಾರ್ ಬಧೆ ಹೇಳಿದ್ದಾರೆ. ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿಯ 47ನೇ ಅಧಿವೇಶನದಲ್ಲಿ ಅವರು ಮಾತನಾಡಿದರು.
ಈ ಹಿಂದೆ , ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ಪ್ರತಿನಿಧಿ ಖಲೀಲ್ ಹಾಶ್ಮಿ ನೀಡಿದ್ದ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಜಮ್ಮು-ಕಾಶ್ಮೀರದ ಜನತೆಯ ಮೂಲಭೂತ ಹಕ್ಕಿನ ಮರುಸ್ಥಾಪನೆ ಖಾತರಿ ಪಡಿಸಲು ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿ ಕ್ರಮ ಕೈಗೊಳ್ಳಬೇಕೆಂದು ಹಾಶ್ಮಿ ಹೇಳಿದ್ದರು.
ಪಾಕಿಸ್ತಾನದ ಹೇಳಿಕೆ ಅವಾಸ್ತವಿಕ ಮತ್ತು ಬೇಜವಾಬ್ದಾರಿಯದ್ದಾಗಿದೆ. ತಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಯಿಂದ ವಿಶ್ವಸಂಸ್ಥೆಯ ಗಮನ ಬೇರೆಡೆ ಸೆಳೆಯಲು ಅವರು ಈ ಆರೋಪ ಮಾಡುತ್ತಿದ್ದಾರೆ . ಪಾಕಿಸ್ತಾನದಲ್ಲಿ ಪ್ರತೀದಿನ ಬಲವಂತದ ಮತಾಂತರ ನಡೆಯುತ್ತಿದೆ. ಧಾರ್ಮಿಕ ಅಲ್ಪಸಂಖ್ಯಾತ ವರ್ಗದ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಅಪಹರಿಸಿ, ಅತ್ಯಾಚಾರ ಎಸಗಿ, ಬಲವಂತವಾಗಿ ಮತಾಂತರಗೊಳಿಸಿ ಮದುವೆಯಾಗುವ ವರದಿಯನ್ನು ಗಮನಿಸಬಹುದು ಎಂದು ಬಧೆ ತಿರುಗೇಟು ನೀಡಿದರು.







