ಉತ್ತರಪ್ರದೇಶ: ಉಪ ಮುಖ್ಯಮಂತ್ರಿ ಪಟ್ಟಕ್ಕೆ ನಿಷಾದ್ ಪಕ್ಷ ಪಟ್ಟು
ಲಕ್ನೋ, ಜೂ.23: ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ನಿಷಾದ್ ಪಕ್ಷದ ಅಧ್ಯಕ್ಷರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಪಕ್ಷ ಆಗ್ರಹಿಸಿದೆ.
ಸಂಜಯ್ ನಿಷಾದ್ ಅವರ ನೇತೃತ್ವದ ನಿಷಾದ್ ಪಕ್ಷ ವಿಧಾನಸಭೆಯಲ್ಲಿ ಒಬ್ಬ ಶಾಸಕರನ್ನು ಹೊಂದಿದೆ. ಸಂಜಯ್ ನಿಷಾದ್ ಪುತ್ರ ಪ್ರವೀಣ್ ಬಿಜೆಪಿಯ ಸಂಸದರಾಗಿದ್ದಾರೆ. 2022ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ 160 ಸ್ಥಾನಗಳನ್ನು ಬಿಟ್ಟುಕೊಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರಿಗೆ ಬೇಡಿಕೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಸುಮಾರು 70 ಕ್ಷೇತ್ರದಲ್ಲಿ ನಿಷಾದ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಖ್ಯಮಂತ್ರಿ ಹುದ್ದೆ ಬೇಡ, ಆದರೆ ನನ್ನನ್ನು ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದರೆ ಬಿಜೆಪಿಗೇ ಲಾಭ ಎಂದು ನಿಷಾದ್ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ನಿಷಾದ್ ರನ್ನು ಬಿಟ್ಟು ಬೇರೆ ಎಲ್ಲಾ ಜಾತಿಯವರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿದ್ದಾರೆ. ಆದ್ದರಿಂದ ಈ ಬಾರಿ ನಿಷಾದ್ ಸಮುದಾಯಕ್ಕೂ ಒಂದು ಅವಕಾಶ ದೊರಕಬೇಕು ಎಂದ ಸಂಜಯ್ ನಿಷಾದ್, ನಿಷಾದ್ ಸಮುದಾಯಕ್ಕೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕೆಂದು ನಡ್ಡಾ ಹಾಗೂ ಉ.ಪ್ರದೇಶ ಸರಕಾರವನ್ನು ಆಗ್ರಹಿಸಲಾಗಿದೆ ಎಂದಿದ್ದಾರೆ.





