ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ ಅಶ್ವಿನ್

ಸೌತಾಂಪ್ಟನ್: ಭಾರತದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 2019-21ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಒಟ್ಟು 71 ವಿಕೆಟ್‌ಗಳನ್ನು ಕಬಳಿಸಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
34 ವರ್ಷದ ತಮಿಳುನಾಡು ಆಫ್ ಸ್ಪಿನ್ನರ್ ಅಶ್ವಿನ್ ನ್ಯೂಝಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಈ ಸಾಧನೆ ಮಾಡಿದ್ದಾರೆ, ಈ ವರ್ಷದ ಡಬ್ಲ್ಯುಟಿಸಿಯಲ್ಲಿ ಅಶ್ವಿನ್ ಅವರ 14 ನೇ ಟೆಸ್ಟ್ ಇದಾಗಿದೆ. ನ್ಯೂಝಿಲ್ಯಾಂಡ್ ಓಪನರ್ ಡೆವೊನ್ ಕಾನ್ವೇ ಅವರು ಅಶ್ವಿನ್ ಪಡೆದ 71 ನೇ ವಿಕೆಟ್ ಆಗಿದೆ.
ಫೈನಲ್‌ನಲ್ಲಿ ಅಶ್ವಿನ್ ಮೊದಲ (2/28) ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ (2/17) ತಲಾ ಎರಡು ವಿಕೆಟ್ ಪಡೆದರು.
ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್ ತಂಡ ಭಾರತವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದ ನಂತರ ಚೊಚ್ಚಲ ಟೆಸ್ಟ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಅಶ್ವಿನ್ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ನಾಲ್ಕು ಬಾರಿ ಐದು ವಿಕೆಟ್ ಗೊಂಚಲು ಪಡೆದರು. 145 ಕ್ಕೆ ಏಳು ವಿಕೆಟ್ ಶ್ರೇಷ್ಠ ಸಾಧನೆಯಾಗಿದೆ. ಅವರು ಒಂದು ಶತಕದೊಂದಿಗೆ ಒಟ್ಟು 324 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ 14 ಟೆಸ್ಟ್ ಪಂದ್ಯಗಳಲ್ಲಿ 70 ವಿಕೆಟ್ ಗಳನ್ನು ಕಬಳಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ 17 ಟೆಸ್ಟ್ ಪಂದ್ಯಗಳಲ್ಲಿ 69 ವಿಕೆಟ್ ಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.