ಕನ್ನಡಕವಿಲ್ಲದೇ ಪತ್ರಿಕೆ ಓದಲು ಸಾಧ್ಯವಾಗದ ವರ: ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು !

photo: News 18
ಹೊಸದಿಲ್ಲಿ:ಕುಟುಂಬಗಳ ನಡುವೆ ಸಾಮರಸ್ಯ ಇಲ್ಲದೆ ಇದ್ದರೆ ಅಥವಾ ಮದುವೆಯಾಗುವ ಜೋಡಿಯ ನಡುವೆ ವ್ಯತ್ಯಾಸವಿದ್ದರೆ ವಿವಾಹಗಳು ರದ್ದಾಗುವುದು ಪ್ರಪಂಚದಾದ್ಯಂತ ನಡೆಯುವ ಸಾಮಾನ್ಯ ಘಟನೆಯಾಗಿದೆ. ಆದರೆ., ವರನು ತನ್ನ ಕನ್ನಡಕವಿಲ್ಲದೆ ಪತ್ರಿಕೆ ಓದಲು ಸಾಧ್ಯವಾಗದೇ ಇರುವುದಕ್ಕೆ ಕೊನೆಯ ಕ್ಷಣದಲ್ಲಿ ವಿವಾಹವನ್ನು ನಿಲ್ಲಿಸಿರುವ ಒಂದು ವಿಶಿಷ್ಟ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.
ಸದರ್ ಕೊಟ್ವಾಲಿ ಪ್ರದೇಶದ ಜಮಾಲ್ಪುರ್ ಗ್ರಾಮದ ನಿವಾಸಿ ಅರ್ಜುನ್ ಸಿಂಗ್ ತನ್ನ ಮಗಳು ಅರ್ಚನಾಳ ವಿವಾಹವನ್ನು ಬನ್ಶಿ ಗ್ರಾಮದ ನಿವಾಸಿ ಶಿವಂ ಅವರೊಂದಿಗೆ ನಿಶ್ಚಯಗೊಳಿಸಿದ್ದರು. "ಸುಶಿಕ್ಷಿತ ಹುಡುಗ" ಆಗಿದ್ದರಿಂದ ಶಿವಂ ಅವರನ್ನು ಸಿಂಗ್ ಅವರು ಆಯ್ಕೆ ಮಾಡಿಕೊಂಡರು ಹಾಗೂ ಶೀಘ್ರದಲ್ಲೇ ಮದುವೆಯ ದಿನಾಂಕವನ್ನು ನಿಗದಿಪಡಿಸಿದರು. ಎಲ್ಲಾ ಸಿದ್ಧತೆಗಳನ್ನು ಆರಂಭಿಸಿದರು. ಮದುವೆಗೆ ಮುಂಚಿತವಾಗಿ ಸಾಂಪ್ರದಾಯಿಕವಾದ ‘ಶಗುನ್’ ಸಮಾರಂಭವನ್ನು ಕೂಡ ನೆರವೇರಿಸಿ ವರನಿಗೆ ಮೋಟಾರ್ ಸೈಕಲ್ ಅನ್ನು ಉಡುಗೊರೆಯಾಗಿ ನೀಡಲಾಗಿತ್ತು.
“ಜೂನ್ 20 ರಂದು ಬರಾತ್ ಮೆರವಣಿಗೆ ಮನೆಗೆ ಬಂದಾಗ, ವರನು ಎಲ್ಲ ಸಮಯದಲ್ಲೂ ಕನ್ನಡಕ ಧರಿಸಿದ್ದು ಕಂಡುಬಂತು. ವಧು ಸೇರಿದಂತೆ ಕುಟುಂಬದ ಮಹಿಳೆಯರು ವರನ ದುರ್ಬಲ ದೃಷ್ಟಿಯನ್ನು ಅನುಮಾನಾಸ್ಪವಾದ ನೋಡಿದರು. ನಂತರ ವರ ಶಿವಂಗೆ ತನ್ನ ಕನ್ನಡಕವಿಲ್ಲದೆ ಹಿಂದಿ ಪತ್ರಿಕೆ ಓದಲು ಹೇಳಲಾಯಿತು. ಆತ ಕನ್ನಡಕವಿಲ್ಲದೆ ಓದಲು ವಿಫಲನಾಗಿದ್ದನು. ವರನಿಗೆ ಕನ್ನಡಕವಿಲ್ಲದೆ ನೋಡಲು ಸಾಧ್ಯವಾಗಲಿಲ್ಲ, ಹಾಗೂ ಇದನ್ನು ತಿಳಿದ ವಧು ಅವನನ್ನು ಮದುವೆಯಾಗಲು ನಿರಾಕರಿಸಿದಳು. ಅವಳ ನಿರ್ಧಾರವನ್ನು ಗೌರವಿಸಿ, ವಧುವಿನ ಕುಟುಂಬವೂ ಸರ್ವಾನುಮತದಿಂದ ಒಪ್ಪಿಕೊಂಡಿತು ಮದುವೆಯನ್ನು ನಿಲ್ಲಿಸಲಾಯಿತು’’ ಎಂದು ಮದುಮಗಳ ತಂದೆ ಅರ್ಜುನ್ ಸಿಂಗ್ News18ಕ್ಕೆ ತಿಳಿಸಿದ್ದಾರೆ.
ವಧುವಿನ ಕುಟುಂಬವು ವರನಿಗೆ ವರದಕ್ಷಿಣೆ ರೂಪದಲ್ಲಿ ನೀಡಿದ್ದ ನಗದು ಹಾಗೂ ಮೋಟಾರ್ ಸೈಕಲ್ ಅನ್ನು ಹಿಂದಿರುಗಿಸಬೇಕು ಹಾಗೂ ಮದುವೆಯಲ್ಲಿ ಖರ್ಚು ಮಾಡಿದ ಎಲ್ಲಾ ಹಣವನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿತು. ವರನ ಕಡೆಯವರು ಇದಕ್ಕೆ ನಿರಾಕರಿಸಿದಾಗ, ಔರೈಯಾದ ಕೊಟ್ವಾಲಿಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.







