ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋದ ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಷ್ ಮಹೇಶ್ವರಿ

photo: facebook
ಹೊಸದಿಲ್ಲಿ: ಉತ್ತರಪ್ರದೇಶದ ಗಾಝಿಯಾಬಾದ್ ನಲ್ಲಿ ವೃದ್ದರೊಬ್ಬರ ಮೇಲೆ ನಡೆದ ಹಲ್ಲೆ ಕುರಿತು ಮಾಡಿರುವ ಟ್ವೀಟ್ ಗಳಿಗೆ ಸಂಬಂಧಿಸಿ ದಾಖಲಾಗಿರುವ ಪೊಲೀಸ್ ಪ್ರಕರಣದಲ್ಲಿ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಅಥವಾ ಬಂಧನದಿಂದ ರಕ್ಷಣೆ ಕೋರಿ ಟ್ವಿಟರ್ ನ ಭಾರತದ ಮುಖ್ಯಸ್ಥ ಮನೀಷ್ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಅವರು ಇಂದು ವಿಚಾರಣೆ ನಡೆಸಲಿದ್ದಾರೆ.
ಗಾಝಿಯಾಬಾದ್ ಪೊಲೀಸರು ಬೆಂಗಳೂರು ನಿವಾಸಿ ಮಹೇಶ್ವರಿಯವರನ್ನು ವಿಚಾರಣೆಗೆ ಕರೆದ ನಂತರ ಈ ಅರ್ಜಿಯನ್ನು ಜೂನ್ 23 ರಂದು ಸಲ್ಲಿಸಲಾಯಿತು. ಪೊಲೀಸರ ಮುಂದೆ ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸಲು ಮಹೇಶ್ವರಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು.
ಮಹೇಶ್ವರಿ ಅವರು ಇಂದು ಬೆಳಿಗ್ಗೆ 10.30 ಕ್ಕೆ ಗಾಝಿಯಾಬಾದ್ ನ ಲೋನಿ ಪೊಲೀಸ್ ಠಾಣೆಯಲ್ಲಿ ಹಾಜರಾಗಬೇಕಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಅವರು ಇಲ್ಲಿಯವರೆಗೆ ಅಲ್ಲಿ ಕಾಣಿಸಿಕೊಂಡಿಲ್ಲ ಎಂದು ಸರ್ಕಲ್ ಅಧಿಕಾರಿ ಅತುಲ್ ಸೋಂಕರ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ವೀಡಿಯೊ ಕಾಲ್ ಮೂಲಕ ವಿಚಾರಣೆಗೆ ತಾನು ಲಭ್ಯವಿರುತ್ತೇನೆ ಎಂದು ಸೋಮವಾರ ಮಹೇಶ್ವರಿ ಹೇಳಿದ್ದರು. ಆದರೆ, ಈ ಪ್ರಸ್ತಾವವನ್ನು ತಿರಸ್ಕರಿಸಿದ್ದ ಉತ್ತರಪ್ರದೇಶ ಪೊಲೀಸರು ಖುದ್ದಾಗಿ ಹಾಜರಾಗುವಂತೆ ಸೂಚಿಸಿದ್ದರು.
ವಯೋವೃದ್ಧರ ಮೇಲೆ ಗುಂಪೊಂದು ಹಲ್ಲೆ ನಡೆಸಿ ಜೈ ಶ್ರೀರಾಮ್ ಹಾಗೂ ವಂದೇ ಮಾತರಂ ಘೋಷಣೆ ಕೂಗುವಂತೆ ಒತ್ತಾಯಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆದ ಬಳಿಕ ಕಳೆದ ವಾರ ಟ್ವಿಟರ್ ಇಂಡಿಯಾ, ಹಲವು ಪತ್ರಕರ್ತರು ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.







