ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ವೀಕೆಂಡ್ ಕರ್ಫ್ಯೂ : ಏನಿದೆ ? ಏನಿಲ್ಲ ?
ಹಾಲು, ಮೆಡಿಕಲ್, ಆಸ್ಪತ್ರೆ, ತುರ್ತು ಸೇವೆಗಳಿಗಷ್ಟೇ ಅವಕಾಶ

ಮಂಗಳೂರು, ಜೂ. 24: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಹಾಲು, ಪೇಪರ್, ಮೆಡಿಕಲ್ ಹಾಗೂ ತುರ್ತು ಸೇವೆಗಳಿಗಷ್ಟೇ ಅವಕಾಶ ಇರಲಿದೆ.
ವೀಕೆಂಡ್ ಕರ್ಫ್ಯೂವಿನಲ್ಲಿ ದಿನಸಿ ಅಂಗಡಿ, ಮದ್ಯದಂಗಡಿ ಸೇರಿದಂತೆ ಇತರ ಎಲ್ಲವೂ ಬಂದ್ ಆಗಲಿದ್ದು, ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿರಲಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ತುರ್ತು ಅಗತ್ಯ ಸೇವೆಗಳು ಮತ್ತು ಕೋವಿಡ್ 19 ಕಂಟೇನ್ಮೆಂಟ್ ಮತ್ತು ನಿರ್ವಹಣೆ ಕರ್ತವ್ಯಗಳ ನಿರ್ವಹಣೆಗೆ ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಅನುಮತಿ ಇರಲಿದೆ. ಕರ್ತವ್ಯನಿರತ ಅಧಿಕಾರಿಗಲು ಹಾಗೂ ಸಿಬ್ಬಂದಿಯ ಅನಿಯಂತ್ರಿತ ಚಲನೆಯನ್ನು ಅನುಮತಿಸಲಾಗಿದೆ.
ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಮತ್ತು 24x7 ಕಾರ್ಯಾಚರಣೆಗಳ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು/ ಕಂಪನಿಗಳು/ ಸಂಸ್ಥೆಗಳು ಕಾರ್ಯ ನಿರ್ವಹಿಸಲು ಅನುಮತಿ ಇರಲಿದೆ. ಅಂತಹ ಸಂಸ್ಥೆಗಳ ನೌಕರರು, ತಮ್ಮ ಗುರುತಿನ ಚೀಟಿ ತೋರಿಸಿ ಸಂಚರಿಸಬಹುದು. ಅದಾಗ್ಯೂ ಸಾಧ್ಯವಾದಷ್ಟು ಮಟ್ಟಿಗೆ ನೌಕರರನ್ನು ಮನೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಟೆಲಿಕಾಂ ಮತ್ತು ಇಂಟರ್‌ನೆಟ್ ಸೇವೆಯ ನೌಕರರು ಮತ್ತು ವಾಹನಗಳಿಗೆ ಆಯಾ ಸಂಸ್ಥೆ ನೀಡುವ ಗುರುತಿನ ಚೀಟಿ ತೋರಿಸಿ ಸಂಚರಿಸಬಹುದು. ಐಟಿ ಮತ್ತು ಐಟಿಇಎಸ್ ಕಂಪನಿಗಳು, ಸಂಸ್ಥೆಯ ಅಗತ್ಯ ಸಿಬ್ಬಂದಿ, ನೌಕರರು ಮಾತ್ರವೇ ಕಚೇರಿಯಿಂದ ಕಾರ್ಯ ನಿರ್ವಹಿಸುವುದು. ಉಳಿದಂತೆ ಮನೆಯಿಂದಲೇ ಕಾರ್ಯ ನಿರ್ವಹಿಸಬೇಕು.
ರೋಗಿಗಳು ಮತ್ತು ಪರಿಚಾರಕರು/ ತುರ್ತು ಅಗತ್ಯವಿರುವ ವ್ಯಕ್ತಿಗಳು, ಲಸಿಕೆ ತೆಗೆದುಕೊಳ್ಳಲು ಉದ್ದೇಶಿಸಿರುವ ಅರ್ಹ ಜನರಿಗೆ ಕನಿಷ್ಠ ಪುರಾವೆಗಳೊಂದಿಗೆ ಸಂಚಾರವನ್ನು ಅನುಮತಿಸಲಾಗಿದೆ.
ರೆಸ್ಟೋರೆಂಟ್ ಹೊಟೇಲ್‌ಗಳಿಂದ ತಿನಿಸುಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಮತ್ತು ಹೋಂ ಡೆಲಿವರಿಗೆ ಮಾತ್ರ ಅನುಮತಿಸಲಾಗುತ್ತದೆ.
ದೂರ ಪ್ರಯಾಣಿಸುವ ಅಂತರ್ ಜಿಲ್ಲಾ ಬಸ್‌ಗಳು, ರೈಲುಗಳು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿ ಇದೆ. ವಿಮಾನ ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು/ ರೈಲ್ವೇ ನಿಲ್ದಾಣಗಳು ಇತ್ಯಾದಿಗಳಿಗೆ ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಚಲನೆಗೆ ಅವಕಾಶ. ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣದ ದಾಖಲೆಗಳು/ ಟಿಕೆಟ್‌ಗಳನ್ನು ತೋರಿಸಿ ಹಾಗೂ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸಿ ಸಂಚರಿಸಲು ಅವಕಾಶವಿದೆ.
ಕೋವಿಡ್ ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಈಗಾಗಲೇ ನಿಗದಿಪಡಿಸಿದ ವಿವಾಹಗಳನ್ನು ಆಯಾ ಮನೆಯಲ್ಲಿ ನಿಕಟ ಕುಟುಂಬ ಸಂಬಂಧಿಕರು ಮಾತ್ರ ಒಳಗೊಂಡು ಗರಿಷ್ಠ 25 ಜನರ ಪರಿಮಿತಿಗೊಳಪಟ್ಟು ನಡೆಸಲು ಅನುಮತಿಸಲಾಗಿದೆ.
ಕೋವಿಡ್ ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಗರಿಷ್ಠ 5 ಜನರ ಪರಿಮಿತಿಯೊಳಗೆ ಅಂತ್ಯಸಂಸ್ಕಾರ ಮಾಡಲು ಅನುಮತಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.







