ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಅಖಿಲ್ ಗೊಗೊಯಿ ಭಾಷಣ ಯುಎಪಿಎ ಅಡಿ ಅಪರಾಧವಾಗುವುದಿಲ್ಲ: ಎನ್‍ಐಎ ನ್ಯಾಯಾಲಯ

ಹೊಸದಿಲ್ಲಿ: ಅಸ್ಸಾಂನ ಛಬುವಾ ಎಂಬಲ್ಲಿ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ಪ್ರತಿಭಟನೆ ವೇಳೆ ರೈತ ನಾಯಕ ಅಖಿಲ್ ಗೊಗೊಯಿ ಅವರು ಮಾಡಿದ ಭಾಷಣವು ಒಂದು ತೀಕ್ಷ್ಣ ರಾಜಕೀಯ ಹೇಳಿಕೆಯಾಗಿರಬಹುದು ಆದರೆ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯಡಿಯಲ್ಲಿ ಅಪರಾಧವಲ್ಲ ಎಂದು ಹೇಳಿರುವ ವಿಶೇಷ ಎನ್‍ಐಎ ನ್ಯಾಯಾಲಯ, ಶಿವಸಾಗರ್ ಶಾಸಕರಾಗಿರುವ ಗೊಗೊಯಿ ಅವರನ್ನು ದೋಷಮುಕ್ತಗೊಳಿಸಿದೆ.
"ಆಸ್ತಿಪಾಸ್ತಿ ನಷ್ಟಗೊಳಿಸಲು ಅಥವಾ ಸರಕಾರಿ ಅಧಿಕಾರಿಗಳಿಗೆ ತಡೆಯೊಡ್ಡಲು ಗೊಗೊಯಿ ಅವರ ಭಾಷಣ ಪ್ರಚೋದಿಸಿಲ್ಲ ಹಾಗೂ ಅದನ್ನು ಯುಎಪಿಎ ಅಡಿಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ" ಎಂದು ತಮ್ಮ ಆದೇಶದಲ್ಲಿ ಎನ್‍ಐಎ ನ್ಯಾಯಾಧೀಶ ಪ್ರಾಂಜಲ್ ದಾಸ್ ಹೇಳಿದ್ದಾರೆ.
"ದೇಶದ ಏಕತೆ, ಸಮಗ್ರತೆ, ಸಾರ್ವಭೌಮತ್ವ ಮತ್ತು ಭದ್ರತೆಗೆ ಅಪಾಯವೊಡ್ಡುವಂತಹ ಉಗ್ರ ಕೃತ್ಯವೆಂದು ಅವರ ವಿರುದ್ಧ ಪ್ರಸ್ತುತಪಡಿಸಲಾಗಿರುವ ಸಾಕ್ಷ್ಯಗಳಿಂದ ತಿಳಿದು ಬರುವುದಿಲ್ಲ" ಎಂದು ತಮ್ಮ 58 ಪುಟಗಳ ಆದೇಶದಲ್ಲಿ ದಾಸ್ ಮಂಗಳವಾರ ಹೇಳಿದ್ದಾರೆ.
ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಮೂವರು ವಿದ್ಯಾರ್ಥಿನಿ ಹೋರಾಟಗಾರರಿಗೆ ದಿಲ್ಲಿ ಹೈಕೋರ್ಟ್ ಇತ್ತೀಚೆಗೆ ಜಾಮೀನು ಮಂಜೂರುಗೊಳಿಸಿರುವುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆಯಾದರೂ "ಇಂತಹ ತೀರ್ಪನ್ನೇ ನೀಡಬೇಕೆಂಬ ಬದ್ಧತೆಯೇನೂ ಇಲ್ಲ ಆದರೆ ಯುಎಪಿಎ ಆಡಿಯಲ್ಲಿ ಯಾವುದು ಉಗ್ರ ಚಟುವಟಿಕೆ ಎಂದು ಪರಿಗಣಿತವಾಗುತ್ತದೆ ಎಂಬುದನ್ನು ದಿಲ್ಲಿ ಹೈಕೋರ್ಟ್ ತೀರ್ಪಿನಲ್ಲಿ ಮಂಡಿಸಲಾಗಿರುವ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ" ಎಂದು ಅವರು ಹೇಳಿದರು.
ವಿವಿಧ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಗೊಗೊಯಿ ವಿರುದ್ಧ ಇರುವ 15 ಪ್ರಕರಣಗಳಲ್ಲಿ ಇದು ಮೊದಲನೆಯದಾಗಿದೆ.







