ಪಂತರಪಾಳ್ಯದಲ್ಲಿ 200 ಹಾಸಿಗೆಗಳ ಸುಸಜ್ಜಿತ ಸರಕಾರಿ ಆಸ್ಪತ್ರೆ: ವಿ.ಸೋಮಣ್ಣ

ಬೆಂಗಳೂರು, ಜೂ. 24: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡಿನ ಪಂತರಪಾಳ್ಯದಲ್ಲಿ 200 ಹಾಸಿಗೆಗಳ ಸರಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ವಸತಿ ಸಚಿವ ವಿ.ಸೋಮಣ್ಣ ಗುರುವಾರ ಚಾಲನೆ ನೀಡಿದರು.
ಈ ಆಸ್ಪತ್ರೆಯು 2.47 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದ್ದು, ನಾಲ್ಕು ಮಹಡಿಗಳ ಈ ಸುಸಜ್ಜಿತ ಆಸ್ಪತ್ರೆಯ ನೆಲ ಮಹಡಿ ಯಲ್ಲಿ ತುರ್ತು ವಿಭಾಗ, ಮೈನರ್ ಒಟಿ ಹಾಗೂ ರೆಡಿಯಾಲಜಿ ವಿಭಾಗ ಇರಲಿದೆ. ಮೊದಲನೆ ಮಹಡಿಯಲ್ಲಿ ಶಸ್ತ್ರ ಚಿಕಿತ್ಸಾ ಕೊಠಡಿ ಸೇರಿದಂತೆ ಮತ್ತಿತರ ಪ್ರಮುಖ ಸೌಲಭ್ಯಗಳಿರುತ್ತವೆ ಎಂದು ಸೋಮಣ್ಣ ಹೇಳಿದರು.
ಎರಡನೆ ಮಹಡಿ ಐಸಿಯು ಹಾಸಿಗೆಗಳನ್ನು ಒಳಗೊಂಡಿರುತ್ತದೆ, ಮೂರು ಹಾಗೂ ನಾಲ್ಕನೆ ಮಹಡಿಗಳಲ್ಲಿ ತಲಾ 100 ಹಾಸಿಗೆಗಳ ಪ್ರತ್ಯೇಕ ಕೊಠಡಿಗಳು ಸಿದ್ಧವಾಗಲಿದ್ದು, ಈ ಭಾಗದ ಪ್ರತಿಷ್ಠಿತ ಸರಕಾರಿ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಸೋಮಣ್ಣ ಹೇಳಿದರು.
ಕಾರ್ಯಕ್ರಮದಲ್ಲಿ ನಗರಪಾಲಿಕೆಯ ಮಾಜಿ ಸದಸ್ಯರಾದ ಸವಿತಾ ಕೃಷ್ಣ, ಶಕುಂತಲ ದೊಡ್ಡಲಕ್ಕಪ್ಪ, ರಾಜೇಶ್ವರಿ ಬೆಳಗೋಡು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.





