ಕೇಂದ್ರ-ರಾಜ್ಯ ಸರಕಾರಗಳ ವಿರುದ್ಧ ಜೆಡಿಎಸ್ ಪ್ರತಿಭಟನೆ

ಉಡುಪಿ, ಜೂ.24: ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ, ತೈಲ ಬೆಲೆಯಲ್ಲಿ ಆಗಿರುವ ಹೆಚ್ಚಳ ಮತ್ತು ಕೊರೋನಾ ನಿರ್ವಹಣೆಯಲ್ಲಿ ಆಗಿರುವ ವೈಫಲ್ಯವನ್ನು ವಿರೋಧಿಸಿ ಉಡುಪಿ ಜಿಲ್ಲಾ ಜಾತ್ಯತೀತ ಜನತಾ ದಳ ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕೇರಿ ಎದುರು ಪ್ರತಿಭಟನೆ ನಡೆಸಿತು.
ಕೊರೋನದಿಂದಾಗಿ ಜನರ ನಿತ್ಯಬದುಕೇ ದುಸ್ತರವಾಗಿದೆ. ಆರೋಗ್ಯ, ಉದ್ಯೋಗಕ್ಕಾಗಿ ಜನರು ಹೋರಾಡುತ್ತಿದ್ದಾರೆ. ಈ ನಡುವೆ ಕೇಂದ್ರ, ರಾಜ್ಯ ಸರಕಾರಗಳು ಇಂಧನ ದರ ಏರಿಕೆ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಆರೋಪಿಸಿದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೆ ರಾಜ್ಯದ ಜನತೆಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದ ಯೋಗೀಶ್ ಶೆಟ್ಟಿ, ಇಂಧನ ದರ ಏರಿಕೆಯಿಂದಾಗಿ ಕೃಷಿ ಚಟುವಟಿಕೆಗಳಿಗೂ ಭಾರೀ ಹಿನ್ನಡೆಯಾಗಿದೆ. ಕೇಂದ್ರ ಮತ್ತು ರಾಜ್ಯ ಗಳೆರಡರಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದು ಜನಕ್ಕೆ ಏನು ಪ್ರಯೋಜನ ಆಗಿದೆ ಎಂದು ಪ್ರಶ್ನಿಸಿದ ಅವರು, ರಾಷ್ಟ್ರೀಯ ಪಕ್ಷಗಳಿಗೆ ಜನರ ಹಿತ ಬೇಕಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊರೋನ ಮೊದಲ ಅಲೆ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರಕಾರ ತಜ್ಞರ ಅಭಿಪ್ರಾಯ,ಸಲಹೆ ಪಡೆಯದೆ ದೇಶವನ್ನು ಮೃತ್ಯು ಕೂಪಕ್ಕೆ ತಳ್ಳಿದೆ. ಸಾಂಕ್ರಾಮಿಕ ಕಾಲದಲ್ಲಿ ಬೆಲೆಯೇರಿಕೆ ಮಾಡಿ ಬಡವರ ಮಧ್ಯಮ ವರ್ಗದ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ತಿನ್ನುವ ಆಹಾರಕ್ಕೂ ದುಬಾರಿ ಬೆಲೆ, ಓಡಾಟ ಮಾಡುವ ಪೆಟ್ರೋಲಿಯಂ ವಸ್ತುಗಳಿಗೂ ದುಬಾರಿ ಬೆಲೆ ಎಂದು ಯೋಗೀಶ್ ಶೆಟ್ಟಿ ಕಿಡಿಕಾರಿದರು.
ಜನಜೀವನಕ್ಕೆ ತೊಡಕಾಗಿರುವ ಬೆಲೆಯೇರಿಕೆ ಇಳಿಸದಿದ್ದರೆ ಜೆಡಿಎಸ್ ಮತ್ತು ಮಿತ್ರಪಕ್ಷಗಳು ದೇಶವ್ಯಾಪಿ ಪ್ರತಿಭಟನೆ ಮಾಡಲಿವೆ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರತಿಭಟನಕಾರರು ಸರಕಾರಗಳಿಗೆ ಎಚ್ಚರಿಕೆ ನೀಡಿದರು.
ಕಾರ್ಯದರ್ಶಿ ಜಯರಾಮ ಆಚಾರ್ಯ, ಪ್ರಮುಖರಾದ ಗಂಗಾಧರ ಬಿರ್ತಿ, ಮನ್ಸೂರ್ ಇಬ್ರಾಹಿಂ, ಜಯಕುಮಾರ್ ಪರ್ಕಳ, ಪ್ರಕಾಶ್ ಶೆಟ್ಟಿ, ಹುಸೇನ್, ರಮೇಶ್ ಕುಂದಾಪುರ, ಶ್ರೀಕಾಂತ್ ಪೂಜಾರಿ, ರಂಜಿತ್ ಪೂಜಾರಿ, ಸುರೇಶ್ ದೇವಾಡಿಗ, ವೆಂಕಟೇಶ್, ಬಾಲಕೃಷ್ಣ ಆಚಾರ್ಯ, ಮೊಹಮ್ಮದ್ ಸುಲೈಮಾನ್, ಮೊಹಮ್ಮದ್ ಯೂಸೂಫ್, ವಿನ್ಸೆಂಟ್ ಸುನಿಲ್ ಅಲ್ಮೆಡಾ ಉಪಸ್ಥಿತರಿದ್ದರು.
ಪ್ರತಿಭಟನೆಯ ಕೊನೆಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ತೈಲಬೆಲೆ ಇಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.









