ಉಡುಪಿ: ಕೋವಿಡ್ ಗೆ 7 ಬಲಿ; 123 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಜೂ.24 : ಕಳೆದ ಕೆಲವು ದಿನಗಳಿಂದ ನಿಯಂತ್ರಣಕ್ಕೆ ಬಂದಂತಿದ್ದ ಕೋವಿಡ್, ಗುರುವಾರ ಹಠಾತ್ತನೆ ಏಳು ಮಂದಿಯ ಬಲಿ ಪಡೆದಿದೆ. ಇದರೊಂದಿಗೆ ಮತ್ತೆ 123 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಇಂದು 209 ಮಂದಿ ಚಿಕಿತ್ಸೆಯಿಂದ ಗುಣಮುಖ ರಾದರೆ 1330 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಮೇ 21ರಂದು ಐದಕ್ಕಿಂತ ಹೆಚ್ಚು ಕೋವಿಡ್ ಸಾವು ಸಂಭವಿಸಿತ್ತು. ಇದೀಗ ಗುರುವಾರ ಐವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಒಂದೇ ದಿನದಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ ಉಡುಪಿ ತಾಲೂಕಿನ ನಾಲ್ವರು (69, 57, 77, 52ವರ್ಷ), ಕಾರ್ಕಳದ ಇಬ್ಬರು (67, 75) ಹಾಗೂ ಕುಂದಾಪುರದ (70) ಒಬ್ಬರು ಇದ್ದಾರೆ.
ಎಲ್ಲರೂ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟರು. ಕಾರ್ಕಳದ 75ರ ಹರೆಯದ ಮಹಿಳೆ ಬುಧವಾರ ದಾಖಲಾದ ದಿನವೇ ಮೃತಪಟ್ಟರು. ಉಳಿದವರಲ್ಲಿ ನಾಲ್ವರು ಗುರುವಾರ ಮೃತಪಟ್ಟರೆ, ಇಬ್ಬರು ನಿನ್ನೆ ಸಾವನ್ನಪ್ಪಿದ್ದರು. ಎಲ್ಲರೂ ಗಂಭೀರ ಕೋವಿಡ್ ಗುಣಲಕ್ಷಣದೊಂದಿಗೆ ಉಸಿರಾಟದ ತೊಂದರೆ, ನ್ಯುಮೋನಿಯಾ ಹಾಗೂ ಇತರ ದೈಹಿಕ ಸಮಸ್ಯೆಗಳಿಂದ ಬಳಲುತಿದ್ದರು.
ಇಂದು ಪಾಸಿಟಿವ್ ಬಂದ 123 ಮಂದಿಯಲ್ಲಿ 59 ಮಂದಿ ಪುರುಷರು ಹಾಗೂ 64 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 45, ಕುಂದಾಪುರ ತಾಲೂಕಿನ 50 ಹಾಗೂ ಕಾರ್ಕಳ ತಾಲೂಕಿನ 24 ಮಂದಿ ಅಲ್ಲದೇ ನಾಲ್ವರು ಹೊರಜಿಲ್ಲೆಯವರು ಸೇರಿದ್ದಾರೆ. ಇವರಲ್ಲಿ 12 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 111 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಬುಧವಾರ 209 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 64,094ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3614 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಜಿಲ್ಲೆ ಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 65,809 ಆಗಿದೆ ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,68,238 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಕಲಬುರ್ಗಿ ಯುವಕನಲ್ಲಿ ಕಪ್ಪು ಶಿಲೀಂದ್ರ
ಗುರುವಾರ ಕಲಬುರ್ಗಿಯ 38ರ ಹರೆಯದ ಯುವಕನಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೂಲಕ ಸದ್ಯ ಜಿಲ್ಲೆಯ ಕೆಎಂಸಿಯಲ್ಲಿ ಮೂವರು ಹಾಗೂ ಆದರ್ಶ ಆಸ್ಪತ್ರೆಯಲ್ಲಿ ಒಬ್ಬರು ಮಾತ್ರ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲಿ ಒಬ್ಬರು ಮಾತ್ರ ಉಡುಪಿ ಜಿಲ್ಲೆಯವರು ಎಂದು ಡಿಎಚ್‌ಓ ಡಾ.ಉಡುಪ ತಿಳಿಸಿದರು.







