ಅಯೋಧ್ಯೆ: ಸರಕಾರಿ ಭೂಮಿಯನ್ನು ರಾಮ ಜನ್ಮಭೂಮಿ ಟ್ರಸ್ಟ್ ಗೆ ಮಾರಾಟ ಮಾಡಿದ ಬಿಜೆಪಿ ಮೇಯರ್ ಸಂಬಂಧಿ!
newslaundry.com ವರದಿ

ಹೊಸದಿಲ್ಲಿ,ಜೂ.24: ಅಯೋಧ್ಯೆಯ ಮೇಯರ್ ಹಾಗೂ ಬಿಜೆಪಿ ನಾಯಕ ಹೃಷಿಕೇಶ ಉಪಾಧ್ಯಾಯ ಅವರ ನಿಕಟ ಸಂಬಂಧಿ ದೀಪ ನಾರಾಯಣ ರಾಮಮಂದಿರ ಟ್ರಸ್ಟ್ಗೆ ಮಾರಾಟ ಮಾಡಿರುವ ಭೂಮಿ ಸರಕಾರಕ್ಕೆ ಸೇರಿದ್ದು ಎನ್ನುವುದು ವಿಚಾರಣೆಯಿಂದ ಬಹಿರಂಗಗೊಂಡಿದೆ.
ಸರ್ವೆ ನಂ.135ರಲ್ಲಿರುವ ಈ ಭೂಮಿಯ ಒಡೆತನದ ಬಗ್ಗೆ ಅಯೋಧ್ಯೆ ಜಿಲ್ಲಾಧಿಕಾರಿ ಹಾಗೂ ಟ್ರಸ್ಟ್ನ ಸದಸ್ಯರೂ ಆಗಿರುವ ಅನುಜ ಕುಮಾರ ಝಾ ಅವರು ವಿಚಾರಣೆಗೆ ಆದೇಶಿಸಿದ್ದರು. ಹಳೆಯ ರಿಜಿಸ್ಟರ್ಗಳನ್ನು ಮತ್ತು ನಕಾಶೆಗಳನ್ನು ಪರಿಶೀಲಿಸಿದ ಜಿಲ್ಲಾ ಭೂದಾಖಲೆಗಳ ಇಲಾಖೆಯು ತನ್ನ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು,ಈ ಭೂಮಿಯು ಸರಕಾರದ ಒಡೆತನಕ್ಕೆ ಸೇರಿದೆ ಮತ್ತು ಈ ಭೂಮಿಯನ್ನು ಗೇಣಿಗೆ ಪಡೆದಿದ್ದ ವ್ಯಕ್ತಿಗೆ ಅದನ್ನು ನಾರಾಯಣ್ಗೆ ಮಾರಾಟ ಮಾಡಲು ಯಾವುದೇ ಹಕ್ಕು ಇರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಉಪಾಧ್ಯಾಯರ ಸೋದರಳಿಯ ನಾರಾಯಣ್ ಈ ವರ್ಷದ ಫೆಬ್ರವರಿಯಲ್ಲಿ ಸರ್ವೆ ನಂ.135ರಲ್ಲಿಯ 890 ಚದುರ ಮೀ.ಭೂಮಿಯನ್ನು 20 ಲ.ರೂ.ಗಳಿಗೆ ಖರೀದಿಸಿದ್ದರು ಮತ್ತು ಮೇ ತಿಂಗಳಿನಲ್ಲಿ ಅದನ್ನು ರಾಮ ಜನ್ಮಭೂಮಿ ಟ್ರಸ್ಟ್ಗೆ 2.5 ಕೋ.ರೂ.ಗೆ ಮಾರಾಟ ಮಾಡಿದ್ದರು ಎಂದು ಮಾಧ್ಯಮಗಳು ಕಳೆದ ವಾರ ವರದಿ ಮಾಡಿದ್ದವು.
ಮಹಂತ ವಿಶ್ವನಾಥ ಪ್ರಸಾದಾಚಾರ್ಯ ಎನ್ನುವವರು ಸದ್ರಿ ಭೂಮಿಯನ್ನು ಗೇಣಿಗೆ ಪಡೆದಿದ್ದು,ಆದರೆ ಅವರಿಗೆ ಅದನ್ನು ಮಾರಾಟ ಮಾಡುವ ಹಕ್ಕು ಇರಲಿಲ್ಲ ಎಂದು ಭೂ ದಾಖಲೆಗಳ ಇಲಾಖೆಯು ತನ್ನ ವರದಿಯಲ್ಲಿ ತಿಳಿಸಿದೆ. ಈಗ ದಿವಂಗತರಾಗಿರುವ ವಿಶ್ವನಾಥರು ನಾರಾಯಣ್ ಗೆ ಭೂಮಿಯನ್ನು ಮಾರಾಟ ಮಾಡಿದ್ದ ದೇವೇಂದ್ರ ಪ್ರಸಾದಾಚಾರ್ಯರ ಗುರುಗಳಾಗಿದ್ದರು. ಈ ಭೂಮಿಯು ರಾಮ ಜನ್ಮಭೂಮಿಗೆ ಹೊಂದಿಕೊಂಡಿದ್ದು,ಸದರ್ ತಾಲೂಕಿನ ಕೋಟ ರಾಮಚಂದ್ರದಲ್ಲಿದೆ. ವಿಶ್ವನಾಥ ಯಾವಾಗ ನಿಧನರಾಗಿದ್ದರು ಎನ್ನುವುದು ಸ್ಪಷ್ಟವಿಲ್ಲ,ಆದರೆ ಅವರ ನಿಧನಾನಂತರ ಈ ಭೂಮಿಯ ಗೇಣಿಯು ದೇವೇಂದ್ರರಿಗೆ ವರ್ಗಾವಣೆಗೊಂಡಿತ್ತು ಮೇಯರ್ ಉಪಾಧ್ಯಾಯ ಭೂಮಿಯನ್ನು ಮಾರಾಟ ಮಾಡುವಂತೆ ದೇವೇಂದ್ರರನ್ನು ಓಲೈಸಿದ್ದರು. ‘ಭೂಮಿ ಟ್ರಸ್ಟ್ಗೆ ಸೇರುತ್ತದೆ ಎಂದು ನನಗೆ ತಿಳಿಸಲಾಗಿತ್ತು. ಭೂಮಿಯು ಸರಕಾರಕ್ಕೆ ಸೇರಿದ್ದರಿಂದ ಯಾವ ಬೆಲೆ ಸಿಕ್ಕರೂ ಲಾಭವೇ ಎಂದು ನಾನು ಭಾವಿಸಿದ್ದೆ. ಹೀಗಾಗಿ ಅದನ್ನು 30 ಲ.ರೂ.ಗೆ ಮಾರಾಟ ಮಾಡಿದ್ದೆ ’ಎಂದು ದೇವೇಂದ್ರ ಸುದ್ದಿಸಂಸ್ಥೆಗೆ ತಿಳಿಸಿದರು.
30 ಲ.ರೂ.ಎರಡು ವಹಿವಾಟುಗಳ ಮೊತ್ತವಾಗಿದೆ. ಫೆ.20ರಂದು 890 ಚ.ಮೀ.ಭೂಮಿಯನ್ನು ನಾರಾಯಣ್ಗೆ ಮಾರಾಟ ಮಾಡಿದ್ದ ದೇವೇಂದ್ರ ಅದೇ ದಿನ 370 ಚ.ಮೀ.ವಿಸ್ತೀರ್ಣದ ಇನ್ನೊಂದು ನಿವೇಶನವನ್ನು ಜಗದೀಶ ಪ್ರಸಾದ ಎಂಬಾತನಿಗೆ ಮಾರಿದ್ದರು. ಇವೆರಡೂ ನಿವೇಶನಗಳು ಸರ್ವೆ ನಂ.135ರ ಭಾಗವಾಗಿವೆ.
ಭೂ ದಾಖಲೆಗಳ ಇಲಾಖೆಯು ಸರ್ವೆ ನಂ 135ರ ಒಡೆತನದ ಇತಿಹಾಸವನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 1931ರಲ್ಲಿ ಅದು ರಘುವೀರ ಪ್ರಸಾದ ಎನ್ನುವವರ ಹೆಸರಿನಲ್ಲಿ ‘ಮಾಲಿಕ್-ಎ-ಆಲಾ’ವರ್ಗದಡಿ ನೋಂದಣಿಗೊಂಡಿತ್ತು. ಈ ವರ್ಗದಡಿ ಗೇಣಿದಾರ ಭೂಮಿಯನ್ನು ಮಾರಾಟ ಮಾಡುವ ಹಕ್ಕು ಹೊಂದಿದ್ದ. ನಂತರದ ವರ್ಷಗಳಲ್ಲಿ ಗೇಣಿದಾರರು ಬದಲಾಗುತ್ತಲೇ ಇದ್ದರು. ಗೇಣಿಗೆ ಪಡೆದಿದ್ದ ಭೂಮಿಯನ್ನು ಮಾರಾಟ ಮಾಡುವ ಹಕ್ಕು 1914ರಿಂದ 1963ರವರೆಗೆ ಮಾತ್ರ ಊರ್ಜಿತದಲ್ಲಿತ್ತು ಎನ್ನುವುದು ಇಲ್ಲಿ ಮುಖ್ಯವಾಗಿದೆ.
ಜಿಲ್ಲಾಧಿಕಾರಿ ಏನೆನ್ನುತ್ತಾರೆ?
ವಿಚಾರಣಾ ವರದಿಗೆ ಸಂಬಂಧಿಸಿದಂತೆ ಆಡಳಿತವು ಯಾವ ಕ್ರಮವನ್ನು ಕೈಗೊಂಡಿದೆ ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗೆ,‘ಈವರೆಗೆ ನಮಗೆ ಯಾವುದೇ ದೂರು ಬಂದಿಲ್ಲ. ಯಾವುದಾದರೂ ದೂರು ಬಂದರೆ ನಾವು ಕ್ರಮವನ್ನು ಕೈಗೊಳ್ಳುತ್ತೇವೆ ’ಎಂದು ಜಿಲ್ಲಾಧಿಕಾರಿ ಝಾ ಉತ್ತರಿಸಿದರು.
ಭೂಮಿಯು ಸರಕಾರಕ್ಕೆ ಸೇರಿದ್ದಾದರೆ ಆಡಳಿತವೇ ದೂರು ದಾಖಲಿಸಬೇಕಲ್ಲವೇ ಎಂಬ ಪ್ರಶ್ನೆಗೆ ಅವರು,‘ಅದು ಸರಕಾರಿ ಭೂಮಿ ಹೌದು,ಆದರೆ ಅದನ್ನು ಗೇಣಿಗೆ ನೀಡಲಾಗಿತ್ತು. ಮಾಲಿಕ್-ಎ ಅಲಾ ಮತ್ತು ಪಟ್ಟಾ ಹಿಡುವಳಿದಾರರು ಭೂಮಿಯ ಒಡೆತನ ಸರಕಾರಕ್ಕೆ ಸೇರಿದ್ದರೂ ಅದನ್ನು ಮಾರಾಟ ಮಾಡುವ ಹಕ್ಕು ಹೊಂದಿದ್ದಾರೆ. ತಮ್ಮ ಭೂಮಿಯನ್ನು ಬೇರೆ ಯಾರೋ ಮಾರಾಟ ಮಾಡಿದ್ದಾರೆ ಎಂದು ಅವರು ದೂರಿಕೊಂಡರೆ ಮಾತ್ರ ನಾವು ಕ್ರಮ ಕೈಗೊಳ್ಳಲು ಸಾಧ್ಯ. ಈಗ ಯಾವ ಕ್ರಮವನ್ನು ನಾವು ತೆಗೆದುಕೊಳ್ಳಬೇಕು ’ಎಂದು ಮರುಪ್ರಶ್ನಿಸಿದರು.
ಮಾಲಿಕ್-ಎ-ಆಲಾ ಮತ್ತು ಪಟ್ಟಾ ಹಿಡುವಳಿ ಒಡೆತನ 1914 ಮತ್ತು 1963ರ ನಡುವೆ ಮಾತ್ರ ಊರ್ಜಿತದಲ್ಲಿತ್ತು ಎನ್ನುವುದನ್ನು ಅವರು ಒಪ್ಪಿಕೊಂಡರಾದರೂ,2018ರವರೆಗೂ ವಿಶ್ವನಾಥ ಪ್ರಸಾದಾಚಾರ್ಯ ಪರಂಪರಾಗತ ಗೇಣಿದಾರರಾಗಿದ್ದರು ಮತ್ತು ಅವರ ಉತ್ತರಾಧಿಕಾರಿಗೆ ಅದನ್ನು ಮಾರಾಟ ಮಾಡುವ ಹಕ್ಕು ಇರಲಿಲ್ಲ ಎಂದು ವರದಿಯಲ್ಲಿ ಬೆಟ್ಟು ಮಾಡಲಾಗಿರುವ ಇನ್ನೊಂದು ಅಂಶದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.







