ವೀಕೆಂಡ್‍ಗೆ ಆನ್‍ಲೈನ್‍ನಲ್ಲಿ `ಕಲಾನಿಧಿ' ಸಂಗೀತ ಸುಧೆ: ನಾಳೆಯಿಂದ 3 ದಿನ ಪ್ರಸಾರ
ಉದಾರವಾಗಿ ದೇಣಿಗೆ ನೀಡಿ: ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಮನವಿ

ಬೆಂಗಳೂರು, ಜೂ. 24: `ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಸಂಗೀತ ಕಲಾವಿದರ ನೆರವಿಗಾಗಿ ರೂಪಿಸಲಾಗಿರುವ `ಕಲಾನಿಧಿ- 2021' ಸಂಗೀತ ಕಾರ್ಯಕ್ರಮ ಶುಕ್ರವಾರದಿಂದ ರವಿವಾರದ ವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದ್ದು, ಸಾರ್ವಜನಿಕರು ಎಲ್ಲರೂ ವೀಕ್ಷಿಸಿ ಉದಾರವಾಗಿ ದೇಣಿಗೆ ನೀಡಬೇಕು' ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮನವಿ ಮಾಡಿದ್ದಾರೆ.
ಗುರುವಾರ ನಗರದಲ್ಲಿ ಸಂಸದ ತೇಜಸ್ವಿ ಸೂರ್ಯ, ಗಾಯಕ ವಿಜಯ್ ಪ್ರಕಾಶ್ ಉಪಸ್ಥಿತಿಯಲ್ಲಿ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜಯ್ ಪ್ರಕಾಶ್ ನೇತೃತ್ವದಲ್ಲಿ ಈ ಕಾರ್ಯಕ್ರಮ ರೂಪಿತವಾಗಿದೆ. ಶುಕ್ರವಾರ ಮತ್ತು ಶನಿವಾರ ಸಂಜೆ 7ಗಂಟೆಯಿಂದ ರಾತ್ರಿ 10ಗಂಟೆಯ ವರೆಗೆ ಹಾಗೂ ರವಿವಾರ 4ರಿಂದ ರಾತ್ರಿ 10ಗಂಟೆಯ ವರೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ' ಎಂದು ತಿಳಿಸಿದರು.
'ಯೂಟ್ಯೂಬ್ ಸೇರಿ ಜಾಲತಾಣಗಳ ಖಾತೆಗಳಲ್ಲಿ ಕಲಾನಿಧಿ ಕಾರ್ಯಕ್ರಮ ಪ್ರಸಾರವಾಗಲಿದೆ. ಜಾಗತಿಕ ಮಟ್ಟದ ಪ್ರಸಿದ್ಧಿ ಗಳಿಸಿರುವ ಗಾಯಕರಾದ ವಿಜಯ ಪ್ರಕಾಶ್, ಸೋನು ನಿಗಮ್ ಸೇರಿದಂತೆ ನೂರಕ್ಕೂ ಹೆಚ್ಚು ಖ್ಯಾತ ಕಲಾವಿದರು, ಅನೇಕ ಉದಯೋನ್ಮುಖ ಸಂಗೀತಗಾರರು ತಮ್ಮ ಸಂಗೀತ ಸುಧೆ ಹರಿಸಿದ್ದಾರೆ. ಪ್ರತಿಯೊಬ್ಬರೂ ವೀಕ್ಷಿಸಿ ಕಲಾವಿದರ ಕಷ್ಟಕ್ಕೆ ಮಿಡಿಯಬೇಕು. ಕಾರ್ಯಕ್ರಮ ವೀಕ್ಷಣೆ ಮಾಡುತ್ತಿರುವಾಗಲೇ ತೆರೆಯ ಮೇಲೆ ಯಾವ ಖಾತೆಗೆ ಹಣ ವರ್ಗಾಯಿಸಬೇಕು ಎಂಬ ಮಾಹಿತಿಯೂ ಕಾಣಿಸಿಕೊಳ್ಳುತ್ತದೆ' ಎಂದು ಡಾ.ಅಶ್ವತ್ಥ ನಾರಾಯಣ ಕೋರಿದರು.
ಬ್ಯಾಂಕ್ ಖಾತೆಗೆ ಹಣ: `ದೇಣಿಗೆಯಿಂದ ಸಂಗ್ರಹವಾಗುವ ಹಣವನ್ನು ಸಂಕಷ್ಟದಲ್ಲಿರುವ ಸಂಗೀತ ಕಲಾವಿದರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಕೈಗೆ ನಗದು ಕೊಡುವ ವ್ಯವಹಾರವೇ ಇರುವುದಿಲ್ಲ. ಹೀಗಾಗಿ ಕಲಾನಿಧಿ ಕಾರ್ಯಕ್ರಮದ ಎಲ್ಲ ಹಣಕಾಸು ವ್ಯವಹಾರವೂ ಸಂಪೂರ್ಣ ಪಾರದರ್ಶಕ. ಆದುದರಿಂದ ಇಂತಹ ಮಹತ್ತರ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು' ಎಂದು ಡಾ.ಅಶ್ವತ್ಥನಾರಾಯಣ ಕೋರಿದರು.
ಗೋಷ್ಟಿಯಲ್ಲಿದ್ದ ಸಂಸದ ತೇಜಸ್ವಿ ಸೂರ್ಯ, `ಕಲೆ, ಸಂಗೀತವು ನಮ್ಮೆದುರು ಇರುವ ಸವಾಲುಗಳನ್ನು ಎದುರಿಸಲು ನವಚೈತನ್ಯ ಒದಗಿಸುತ್ತವೆ. ಆದರೆ, ಕೋವಿಡ್ 2ನೆ ಅಲೆಯು ಕಲೆ ಮತ್ತು ಕಲಾವಿದರಿಗೆ ಹಲವು ಅವಕಾಶಗಳಿಂದ ವಂಚಿತರನ್ನಾಗಿಸಿದ್ದು, ಕಲೆಯನ್ನೇ ನಂಬಿಕೊಂಡು ಬದುಕಿರುವ ಹಲವು ಕುಟುಂಬಗಳಿಗೆ ಅನಿರೀಕ್ಷಿತವಾಗಿ ಒದಗಿಬಂದಿರುವ ಕೊರೋನ ಸಾಂಕ್ರಾಮಿಕದ ಹೊಡೆತವು ಜರ್ಝರಿತರನ್ನಾಗಿಸಿದೆ. ಕಲೆಯು ಉಳಿಯಬೇಕೆಂದರೆ, ಕಲಾವಿದರ ಯೋಗಕ್ಷೇಮವೂ ಅವಶ್ಯಕ' ಎಂದು ಹೇಳಿದರು.
`ಕಲಾನಿಧಿ-2021' ದೇಶದ ಪ್ರಮುಖ ಕಲಾವಿದರು, ಮಾನವೀಯ ಕಳಕಳಿಗೆ ಒಂದಾಗುತ್ತಿರುವ ವೇದಿಕೆಯಾಗಿದ್ದು, ಈ ಕಾರ್ಯಕ್ಕೆ ಹರಿದುಬರುವ ನಿಧಿಯನ್ನು ರಾಜ್ಯಾದ್ಯಂತ ಇರುವ ಕಲಾವಿದರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡಲಾಗುವುದು. ಈ ವೇದಿಕೆಯಡಿ ಕಲಾವಿದರು, ಸಹ ಕಲಾವಿದರ ಸಂಕಷ್ಟದ ಸಮಯದಲ್ಲಿ ಕೈಜೋಡಿಸಲಿದ್ದು, ನಿಮ್ಮ ಕಾಣಿಕೆಯು ಇಂತಹ ಅನಿರೀಕ್ಷಿತ ಸನ್ನಿವೇಶದಲ್ಲಿ ಕಲಾವಿದರ ಕುಟುಂಬಗಳಿಗೆ ಸಹಾಯವಾಗಲಿದೆ' ಎಂದು ಅವರು ಕೋರಿದರು. ಈ ವೇಳೆ ಗಾಯಕ ವಿಜಯ್ ಪ್ರಕಾಶ್ ಹಾಜರಿದ್ದರು.
ಇದೊಂದು ಅಪರೂಪದ ಕಾರ್ಯಕ್ರಮ. ಕೋವಿಡ್ ಸೋಂಕಿನ ಸಂಕಷ್ಟದ ಒತ್ತಡ ಕಾಲದಲ್ಲಿ ಸಂಗೀತ ಔಷಧದಂತೆ ಕೆಲಸ ಮಾಡುತ್ತದೆ. ಸಂಗೀತ ಆಲಿಸುವುದರಿಂದ ನಮ್ಮ ಮಿದುಳಿನ ಎಲ್ಲ ಭಾಗಗಳು ಚುರುಕಾಗಿ ಕೆಲಸ ಮಾಡುತ್ತವೆ. ಇದು ವೈಜ್ಞಾನಿಕವಾಗಿ ಸಾಭೀತಾಗಿರುವ ಅಂಶ.
-ಡಾ.ಅಶ್ವತ್ಥ ನಾರಾಯಣ ಉಪಮುಖ್ಯಮಂತ್ರಿ







