ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಸಮೀಕ್ಷೆ: ದಾಖಲೆಗಳ ಪರಿಶೀಲನೆಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಜೂ.24: ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಕೈಗೊಂಡಿರುವ ಸಮೀಕ್ಷೆ ದಾಖಲೆಗಳನ್ನು ಪರಿಶೀಲಿಸಲು ಸರಕಾರ ಸಭೆ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಸಮರ್ಪಕ ಅನುಷ್ಠಾನ ಹಿನ್ನೆಲೆಯಲ್ಲಿ ಹೈಕೋರ್ಟ್ 2013ರಲ್ಲಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲು ಪ್ರತಿ ಮನೆಗೂ ತೆರಳಿ ಸರ್ವೇ ನಡೆಸಬೇಕು. 2020ರ ಎಪ್ರಿಲ್ 30ರೊಳಗೆ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಆದರೆ, ಕೊರೋನ 1 ಮತ್ತು 2ನೆ ಅಲೆಯಿಂದಾಗಿ ಆದೇಶ ಸರಿಯಾಗಿ ಪಾಲನೆಯಾಗಿಲ್ಲ. ಈ ನಡುವೆ ರಾಜ್ಯ ಸರಕಾರ 2021ರ ಜೂ.22 ರಂದು ಮೆಮೊ ಸಲ್ಲಿಸಿ, ಮಕ್ಕಳನ್ನು ಗುರುತಿಸಲು ಸರ್ವೇ ನಡೆಸಿರುವುದಾಗಿ ಹೇಳಿದೆ. ಆದರೆ, ಮನೆ ಮನೆಗೆ ತೆರಳಿ ಸರ್ವೇ ನಡೆಸಿದ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ, ಸಮೀಕ್ಷೆ ಹೇಗೆ ಮತ್ತು ಯಾವ ವಿಧಾನಗಳಿಂದ ನಡೆಸಲಾಗಿದೆ ಎಂಬುದನ್ನು ತಿಳಿಯಲು ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿದೆ. ಅದಕ್ಕಾಗಿ ಪ್ರಕರಣದ ಅಮಿಕಸ್ ಕ್ಯೂರಿ ಮತ್ತು ಇತರ ವಕೀಲರೊಂದಿಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆ ನಡೆಸಬೇಕು. ಸಭೆಯಲ್ಲಿ ಸರಕಾರ ನಡೆಸಿರುವ ಸರ್ವೇ ದಾಖಲೆಗಳು ಹಾಗೂ ಮಾಹಿತಿಯನ್ನು ವಕೀಲರಿಗೆ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.





