ಎಚ್-1ಬಿ ವೀಸಾ: ಕೆಲವರಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಿದ ಅಮೆರಿಕ

ವಾಷಿಂಗ್ಟನ್, ಜೂ.24: ಅಮೆರಿಕದಲ್ಲಿ ಕೆಲಸ ಮಾಡುವ ಕೆಲವು ವಿದೇಶಿ ಉದ್ಯೋಗಿಗಳಿಗೆ ಎಚ್-1ಬಿ ವೀಸಾಕ್ಕೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆರಂಭಿಕ ನೋಂದಣಿ ಸಂದರ್ಭದಲ್ಲೇ ಅರ್ಜಿ ತಿರಸ್ಕತಗೊಂಡವರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅಮೆರಿಕ ಸರಕಾರದ ಮೂಲಗಳು ಹೇಳಿವೆ. ಭಾರತದ ಐಟಿ ವೃತ್ತಿಪರರಲ್ಲಿ
ಎಚ್-1ಬಿ ವೀಸಾಕ್ಕೆ ಹೆಚ್ಚು ಬೇಡಿಕೆಯಿದೆ. ಈ ವೀಸಾಕ್ಕೆ 2020ರ ಅಕ್ಟೋಬರ್ 1ರ ಬಳಿಕ ಅರ್ಜಿ ಸಲ್ಲಿಸಿರುವ ಏಕೈಕ ಕಾರಣಕ್ಕೆ ಅರ್ಜಿ ತಿರಸ್ಕತಗೊಂಡಿದ್ದರೆ ಅಂತವರು ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಯುಎಸ್ ಸಿಟಿಜನ್ಶಿಪ್ ಆ್ಯಂಡ್ ಇಮಿಗ್ರೇಷನ್ ಸರ್ವಿಸಸ್(ಯುಎಸ್ಸಿಐಎಸ್) ಸೂಚಿಸಿದೆ. ಸೈದ್ಧಾಂತಿಕ ಅಥವಾ ತಾಂತ್ರಿಕ ತಜ್ಞರ ಅಗತ್ಯವಿರುವ ಉದ್ಯೋಗಕ್ಕೆ ವಿದೇಶೀಯರನನ್ನು ನೇಮಿಸಿಕೊಳ್ಳಲು ಅಮೆರಿಕದ ಕಂಪೆನಿಗಳಿಗೆ ಎಚ್-1ಬಿ ವೀಸಾ ಅನುವು ಮಾಡಿಕೊಡುತ್ತದೆ.
ಈ ವ್ಯವಸ್ಥೆಯಡಿ ಅಮೆರಿಕದ ತಂತ್ರಜ್ಞಾನ ಸಂಸ್ಥೆಗಳು ಪ್ರತೀ ವರ್ಷ ಸಾವಿರಾರು ಉದ್ಯೋಗಿಗಳನ್ನು ಭಾರತ, ಚೀನಾ ಮುಂತಾದ ದೇಶಗಳಿಂದ ನೇಮಿಸಿಕೊಳ್ಳುತ್ತದೆ. 2020ರಲ್ಲಿ ಯುಎಸ್ಸಿಐಎಸ್ ಎಚ್-1ಬಿ ವೀಸಾಕ್ಕೆ ಇಲೆಕ್ಟ್ರಾನಿಕ್ಸ್ ನೋಂದಣಿ ಪ್ರಕ್ರಿಯೆ ಜಾರಿಗೊಳಿಸಿತು. ಇದರಂತೆ, ಇಲೆಕ್ಟ್ರಾನಿಕ್ಸ್ ಮಾಧ್ಯಮದ ಮೂಲಕ ನೋಂದಣಿ ಮಾಡಿಕೊಂಡು, 10 ಡಾಲರ್ ನೋಂದಣಿ ಶುಲ್ಕ ಪಾವತಿಸಿ ಎಚ್-1ಬಿ ವೀಸಾಕ್ಕೆ ಅರ್ಜಿ ಸಲ್ಲಿಸಬೇಕು. ಆರಂಭಿಕ ಹಂತದ ನೋಂದಣಿ ಅವಧಿಯಲ್ಲಿ ನಿರೀಕ್ಷಿಸಿದ್ದಕ್ಕಿಂತಲೂ ಕಡಿಮೆ ಅರ್ಜಿ ಸಲ್ಲಿಕೆಯಾಗಿದೆ ಎಂದು ಯುಎಸ್ಸಿಐಎಸ್ ಹೇಳಿತ್ತು. ಇದೀಗ ಆರಂಭಿಕ ನೋಂದಣಿ ಹಂತದಲ್ಲಿ ತಿರಸ್ಕತವಾದ ಅರ್ಜಿಯನ್ನು ಮರುಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.







