ಎಲೆಕ್ಟ್ರಾನಿಕ್‍ಸಿಟಿ ಟೋಲ್ ದರ ಹೆಚ್ಚಳ: ಜು.1ರಿಂದ ಜಾರಿ
ಬೆಂಗಳೂರು, ಜೂ.24: ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಎಲೆಕ್ಟ್ರಾನಿಕ್ ಸಿಟಿ ಟೋಲ್ ಹಾಗೂ ಅತ್ತಿಬೆಲೆ ಟೋಲ್ ದರಗಳ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಜು.1ರಿಂದ ಜಾರಿಗೆ ಬರಲಿದೆ.
ಬೆಂಗಳೂರು ಟೋಲ್‍ವೇ ಪ್ರೈ ಲಿ. ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆಯಲ್ಲಿರುವ ಟೋಲ್‍ಗೇಟ್‍ಗಳನ್ನು ನಿರ್ವಹಿಸುತ್ತಿದ್ದು, ಎಲ್ಲ ಮಾದರಿಯ ವಾಹನಗಳ ಸಂಚಾರ ಶುಲ್ಕವನ್ನು ಹೆಚ್ಚಿಸಿಲಾಗಿದೆ. ದ್ವಿಚಕ್ರ ಮಾಸಿಕ ದರವನ್ನು 45ರೂ. ಹೆಚ್ಚಿಸಿದ್ದು, ತಿಂಗಳಿಗೆ 625ರೂ. ಪಾವತಿಸಬೇಕಾಗಿದೆ. ಕಾರಿಗೆ 75ರೂ.ನಿಂದ 80ರೂ.ಹೆಚ್ಚಿಸಿದ್ದು, 1570 ರೂ.ಕಟ್ಟಬೇಕಾಗಿದೆ.
ಲಘು ವಾಣಿಜ್ಯ ವಾಹನಗಳಿಗೆ 80ರೂ.ಆಗಿದ್ದು, ಹಿಂತಿರುಗಿ ಬಂದರೆ 110ರೂ. ಕಟ್ಟಬೇಕಾಗಿದೆ. ಬಸ್, ಗೂಡ್ಸ್ ವಾಹನಗಳಿಗೆ 145ರೂ. ಆಗಿದ್ದು, ಹಿಂತಿರುಗಿ ಬಂದರೆ 220ರೂ. ಪಾವತಿಸಬೇಕಾಗುತ್ತದೆ. ಭಾರಿ ವಾಹನಕ್ಕೆ 295ರೂ. ಆಗಿದ್ದು, ಹಿಂತಿರುಗಿ ಬಂದರೆ 440ರೂ. ಕಟ್ಟಬೇಕಾಗಿದೆ.
ಮಾಸಿಕ ಪಾಸ್ ದರ: ದ್ವಿಚಕ್ರ ವಾಹನಗಳಿಗೆ 625ರೂ., ಕಾರುಗಳಿಗೆ 1570ರೂ., ಲಘು ವಾಹನಗಳಿಗೆ 4390ರೂ, ಭಾರಿ ವಾಹನಗಳಿಗೆ 8780ರೂ. ಮಾಸಿಕ ದರ ಕಟ್ಟಬೇಕಾಗಿದೆ.
ದರ ಹೆಚ್ಚಳಕ್ಕೆ ಆಕ್ರೋಶ: ಕೋವಿಡ್ ಸಂಕಷ್ಟದ ಕಾಲದಲ್ಲಿ ಟೋಲ್ ದರ ಹೆಚ್ಚಳ ಮಾಡಿರುವುದಕ್ಕೆ ರೈತರು, ಕಂಪೆನಿಗಳ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿರುವುದರಿಂದ ಅದನ್ನೇ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ಟೋಲ್ ದರ ಹೆಚ್ಚಳ ಮಾಡಿ ನಮಗೆ ಮತ್ತಷ್ಟು ಸಂಕಷ್ಟಕ್ಕೆ ದೂಡಲಾಗುತ್ತಿದೆ. ದರ ಹೆಚ್ಚಳ ವಿಷಯದಲ್ಲಿ ರಾಜ್ಯ ಸರಕಾರ ಮಧ್ಯೆ ಪ್ರವೇಶಿಸಿ. ದರ ಹೆಚ್ಚಳವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.







