ರಾಜ್ಯದಲ್ಲಿ 30 ಲಕ್ಷ ಮಕ್ಕಳು ಡಿಜಿಟಲ್ ಕಲಿಕೆಯಿಂದ ವಂಚಿತ: ಕೇಂದ್ರ ಸರಕಾರದ ದತ್ತಾಂಶದಲ್ಲಿ ಬಹಿರಂಗ

ಹೊಸದಿಲ್ಲಿ, ಜೂ. 24: ದೇಶಾದ್ಯಂತ ಕೇಂದ್ರ ಸರಕಾರದ ದತ್ತಾಂಶ ಡಿಜಿಟಲ್ ಕಲಿಕಾ ಸೌಲಭ್ಯಗಳಿಲ್ಲದ ಮಕ್ಕಳ ಸಂಖ್ಯೆ ಬಗ್ಗೆ ದಿಗ್ಭ್ರಮೆ ಮೂಡಿಸಿದೆ.
ಬಿಹಾರದಲ್ಲಿ 1 ಕೋಟಿಗೂ ಅಧಿಕ ಹಾಗೂ ಜಾರ್ಖಂಡ್, ಕರ್ನಾಟಕದಲ್ಲಿ 30 ಲಕ್ಷಕ್ಕಿಂತಲೂ ಅಧಿಕ ಮಕ್ಕಳಲ್ಲಿ ಡಿಜಿಟಲ್ ಕಲಿಕಾ ಸಾಧನಗಳಿಲ್ಲ ಎಂದು ಶಿಕ್ಷಣ ಸಚಿವಾಲಯದ ಪ್ರಾಥಮಿಕ ವರದಿ ಹೇಳಿದೆ. ಆದರೆ, ಈ ನಡುವೆ ಕೇರಳ ಹಾಗೂ ರಾಜಸ್ಥಾನದ ಎಲ್ಲಾ ಮಕ್ಕಳಲ್ಲಿ ಡಿಜಿಟಲ್ ಸಾಧನಗಳಿವೆ ಎಂದು ವರದಿ ತಿಳಿಸಿದೆ.
ಈ ದತ್ತಾಂಶವನ್ನು ಶಿಕ್ಷಣ ಸಚಿವಾಲಯ ಶಿಕ್ಷಣ, ಮಹಿಳೆ, ಮಕ್ಕಳು, ಯುವಜನಾಂಗ ಹಾಗೂ ಕ್ರೀಡೆ ಕುರಿತ ಸಂಸದೀಯ ಸ್ಥಾಯಿ ಸಮಿತಿಯೊಂದಿಗೆ ಸೋಮಮವಾರ ಹಂಚಿಕೊಂಡಿದೆ. ಇದು ಪ್ರಾಥಮಿಕ ಹಂತದ ದತ್ತಾಂಶವಾಗಿದ್ದು, ಪಶ್ಚಿಮಬಂಗಾಳ, ಉತ್ತರಪ್ರದೇಶ, ದಿಲ್ಲಿ ಹಾಗೂ ಈಶಾನ್ಯದ ಹೆಚ್ಚಿನ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳು ಇನ್ನಷ್ಟೇ ಅಗತ್ಯ ಇರುವ ದತ್ತಾಂಶವನ್ನು ಸಚಿವಾಲಯದೊಂದಿಗೆ ಹಂಚಿಕೊಳ್ಳಬೇಕಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ ಶಾಲೆ ಹಾಗೂ ಕಾಲೇಜುಗಳು ಬೋಧನೆಗೆ ಆನ್ಲೈನ್ ಮಾದರಿಯನ್ನು ಅನುಸರಿಸಿದ ಬಳಿಕ ಕಳೆದ ಒಂದು ವರ್ಷದಿಂದ ಡಿಜಿಟಲ್ ಕಲಿಕಾ ಸೌಲಭ್ಯದ ಪ್ರಶ್ನೆ ಮತ್ತೆ ಮತ್ತೆ ಉದ್ಭವಿಸುತ್ತಿದೆ.
ಸಮಿತಿಯೊಂದಿಗೆ ಹಂಚಿಕೊಳ್ಳಲಾದ ಪ್ರಾಥಮಿಕ ವರದಿ ಆತಂಕ ಹುಟ್ಟು ಹಾಕಿದೆ. ದೇಶಾದ್ಯಂತದ ಹಲವು ಮಕ್ಕಳಲ್ಲಿ ಈಗಲೂ ಡಿಜಿಟಲ್ ಕಲಿಕಾ ಸಾಧನಗಳಿಲ್ಲ. ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಕಾರಣಕ್ಕೆ ದೇಶಾದ್ಯಂತ ಈ ವರ್ಷ ಕೂಡ ಶಾಲೆಗಳು ಮುಚ್ಚಿವೆ.
ಪ್ರಾಥಮಿಕ ವರದಿ ಸಲ್ಲಿಕೆಯನ್ನು ದೃಢಪಡಿಸಿರುವ ಸಂಸದೀಯ ಸಮಿತಿಯ ಮುಖ್ಯಸ್ಥ ವಿನಯ್ ಸಹಸ್ರಬುದ್ಧೆ, ಇಂಟರ್ನೆಟ್ ಹಾಗೂ ಡಿಜಿಟಲ್ ಸಾಧನಗಳು ಲಭ್ಯವಿಲ್ಲದ ಮಕ್ಕಳ ಸಂಖ್ಯೆಯ ಕುರಿತ ಅಂಕಿ-ಅಂಶವನ್ನು ಶಿಕ್ಷಣ ಸಚಿವಾಲಯ ಹಂಚಿಕೊಂಡಿದೆ. ಆದರೆ, ಸೌಲಭ್ಯಗಳ ಕೊರತೆ ಹಾಗೂ ಅದು ಸೃಷ್ಟಿಸಿದ ಕಲಿಕೆಯ ಅಂತರವನ್ನು ತಿಳಿದುಕೊಳ್ಳಲು ನಾವು ಬಯಸುತ್ತೇವೆ. ಇದನ್ನು ವೌಲ್ಯಮಾಪನ ಮಾಡುವಂತೆ ನಾವು ಸಚಿವಾಲಯದಲ್ಲಿ ವಿನಂತಿಸುತ್ತೇವೆ ಎಂದಿದ್ದಾರೆ.
ಸಚಿವಾಲಯ ಈ ವರದಿಯನ್ನು ಈ ತಿಂಗಳ ಅಂತ್ಯದೊಳಗೆ ಸಲ್ಲಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಶಾಲೆಗಳು ಮುಚ್ಚಿರುವುದರಿಂದ ಉಂಟಾಗಿರುವ ಕಲಿಕಾ ಅಂತರವನ್ನು ನಿವಾರಿಸುವ ಸರಕಾರದ ಯೋಜನೆಯ ಒಂದ ಭಾಗ ಈ ವರದಿ ಹಾಗೂ ದತ್ತಾಂಶ. ಹಲವು ರಾಜ್ಯಗಳು ಸಚಿವಾಲಯಕ್ಕೆ ಇನ್ನಷ್ಟೇ ಅಗತ್ಯ ಇರುವ ದತ್ತಾಂಶವನ್ನು ಸಲ್ಲಿಸಬೇಕಿದೆ. ಇದುವರೆಗೆ ಸಲ್ಲಿಕೆಯಾದ ದತ್ತಾಶದ ಪ್ರಕಾರ, ಬಿಹಾರದಲ್ಲಿ ಡಿಜಿಟಲ್ ಸಾಧನಗಳಿಲ್ಲದ ಮಕ್ಕಳ ಸಂಖ್ಯೆ ಅತಿ ಹೆಚ್ಚು ಇದೆ. ಇಲ್ಲಿ 1.4 ಕೋಟಿ ಮಕ್ಕಳಲ್ಲಿ ಡಿಜಿಟಲ್ ಸಾಧನಗಳಿಲ್ಲ. ಡಿಜಿಟಲ್ ಸಾಧನಗಳಿಲ್ಲದ ಅತಿ ಹೆಚ್ಚಿನ ಸಂಖ್ಯೆಯ ಮಕ್ಕಳಿರುವ ಇತರ ರಾಜ್ಯಗಳೆಂದರೆ ಜಾರ್ಖಂಡ್ (32.5 ಲಕ್ಷ), ಕರ್ನಾಟಕ (31.3 ಲಕ್ಷ) ಹಾಗೂ ಅಸ್ಸಾಂ (31 ಲಕ್ಷ).
ಆದರೆ, ಎಲ್ಲಾ ರಾಜ್ಯಗಳ ದತ್ತಾಂಶಗಳು ಸಲ್ಲಿಕೆಯಾಗದೇ ಇರುವುದರಿಂದ ಲಭ್ಯವಿರುವ ದತ್ತಾಂಶದ ಆಧಾರದಲ್ಲಿ ಯಾವ ರಾಜ್ಯಗಳಲ್ಲಿ ಅತಿ ಹೆಚ್ಚು ಕಲಿಕಾ ಅಂತರ ಇದೆ ಎಂದು ಅಂದಾಜಿಸುವುದು ಕಷ್ಟಕರ.







