ಏಶ್ಯದ ಅತಿದೊಡ್ಡ ನೌಕಾನೆಲೆಯಾಗಿ ಕಾರವಾರ: ರಾಜನಾಥ್ ಸಿಂಗ್

ರಾಜನಾಥ್ ಸಿಂಗ್ (Photo: PTI)
ಹೊಸದಿಲ್ಲಿ, ಜೂ.25: ಕಾರವಾರವನ್ನು ಏಶ್ಯದ ಅತಿದೊಡ್ಡ ನೌಕಾನೆಲೆಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇದನ್ನು ಆಯಕಟ್ಟಿನ ನೌಕಾನೆಲೆಯಾಗಿ ಪರಿವರ್ತಿಸಲು ಹೆಚ್ಚುವರಿ ಅನುದಾನ ಅಗತ್ಯವೆನಿಸಿದರೆ ಒದಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್ಬೀರ್ ಸಿಂಗ್ ಜತೆ ಪ್ರಾಜೆಕ್ಟ್ ಸೀಬರ್ಡ್ ಯೋಜನೆಯಡಿ ಕಾರವಾರದಲ್ಲಿ ನಡೆಯುತ್ತಿರುವ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, "ಈ ನೌಕಾನೆಲೆ ದೇಶದ ಸೇನಾ ಸನ್ನದ್ಧತೆ ಮತ್ತಷ್ಟು ಹೆಚ್ಚವಂತೆ ಮಾಡುವುದು ಮಾತ್ರವಲ್ಲದೇ ಈ ಭಾಗದ ವ್ಯಾಪಾರ, ಆರ್ಥಿಕತೆ ಮತ್ತು ಮಾನವೀಯ ನೆರವಿನ ಕಾರ್ಯಾಚರಣೆಗೂ ನೆರವಾಗಲಿದೆ" ಎಂದು ಸ್ಪಷ್ಟಪಡಿಸಿದರು.
ಕಾರವಾರ, ವಿಮಾನ ಒಯ್ಯಬಲ್ಲ ಐಎನ್ಎಸ್ ವಿಕ್ರಮಾದಿತ್ಯ ಸೇರಿದಂತೆ ಹಲವು ಮುಂಚೂಣಿ ಯುದ್ಧನೌಕೆಗಳ ನೆಲೆಯಾಗಿದೆ. ಪ್ರಸಕ್ತ ಪ್ರಗತಿ ಹಂತದಲ್ಲಿರುವ ಸೀಬರ್ಡ್ 2ಎ ಹಂತದ ಯೋಜನೆ ಪೂರ್ಣಗೊಂಡಲ್ಲಿ ಕಾರವಾರ 32 ಪ್ರಮುಖ ಯುದ್ಧನೌಕೆ ಮತ್ತು ಸಬ್ಮೆರಿನ್ಗಳ ನಿಲುಗಡೆಗೆ ಅವಕಾಶ ಕಲ್ಪಿಸುತ್ತದೆ.
ಈ ನೆಲೆಯು ನೌಕಾಪಡೆಗೆ ಪಶ್ಚಿಮ ಕರಾವಳಿಯಲ್ಲಿ ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನದ ವಿರುದ್ಧ ಅಗತ್ಯ ಆಳ ಮತ್ತು ಕಾರ್ಯಾಚರಣೆಯ ಸ್ಥಿತಿಸ್ಥಾಪಕತ್ವವನ್ನು ಒದಗಿಸುತ್ತದೆ ಮತ್ತು ಮುಂಬೈ ನೆಲೆಯ ಮೇಲಿನ ಹೊರೆಯನ್ನೂ ಕಡಿಮೆ ಮಾಡಲಿದೆ.







