ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಖರೀದಿ ಭರಾಟೆ: ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್!

ಮಂಗಳೂರು, ಜೂ. 25: ದ.ಕ. ಜಿಲ್ಲೆಯಲ್ಲಿ ಇಂದು(ಜೂ.25) ಸಂಜೆ 7 ಗಂಟೆಯಿಂದ ಸೋಮವಾರ(ಜೂ.28) ಬೆಳಗ್ಗೆ 7 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಾಗುವ ಹಿನ್ನೆಲೆಯಲ್ಲಿ ಜನರಿಂದ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಹೆಚ್ಚಿದೆ. ಇದಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ಇಂದು ಕೂಡಾ ವಾಹನದಟ್ಟಣೆ ಹೆಚ್ಚಿದೆ.
ನಗರದ ತರಕಾರಿ, ಹಣ್ಣು ಹಂಪಲು, ಮಾಂಸದಂಗಡಿ ಸೇರಿದಂತೆ ಸೂಪರ್ ಬಝಾರ್, ಸೂಪರ್ ಮಾರುಕಟ್ಟೆಗಳಲ್ಲಿ ಜನರು ಖರೀದಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಬಟ್ಟೆ, ಚಪ್ಪಲಿ ಅಂಗಡಿಗಳು ತೆರೆದಿದ್ದರೂ ಗ್ರಾಹಕರು ಹೆಚ್ಚಾಗಿ ಉಡುಪಗಳ ಖರೀದಿ, ಮಿತದರದ ದಿನಬಳಕೆಯ ಚಪ್ಪಲಿಗಳ ಖರೀದಿಯತ್ತಲೇ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ನಗರದ ಹಂಪಕನಟ್ಟೆ, ಕಾರ್‌ಸ್ಟ್ರೀಟ್, ಕಂಕನಾಡಿ, ಪಂಪ್‌ವೆಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿಯಿದೆ.
ಲಾಕ್‌ಡೌನ್ ಸಡಿಲಿಕೆಯನ್ನು ಅಪರಾಹ್ನ 2 ಗಂಟೆಯವರೆಗೆ ವಿಸ್ತರಿಸಿರುವುದರಿಂದ ಸಾಕಷ್ಟು ಸಮಯಾವಕಾಶವಿದ್ದರೂ ಜನರು ಬೆಳಗ್ಗಿನ ಹೊತ್ತು ಕಚೇರಿ, ಬ್ಯಾಂಕ್ ವ್ಯವಹಾರ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೂ ನಗರ ಪ್ರವೇಶಿಸುವುದರಿಂದ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೂ ರಸ್ತೆಗಳಲ್ಲಿ ವಾಹನಗಳು ಭಾರೀ ಸಂಖ್ಯೆಯಲ್ಲಿ ಓಡಾಡುತ್ತಿರುತ್ತವೆ. ಖಾಸಗಿ ಬಸ್‌ಗಳು ಇಂದು ಕೂಡಾ ರಸ್ತೆಗಳಿದಿಲ್ಲ. ಕೆಲವೊಂದು ಕೆಎಸ್ಸಾರ್ಟಿಸಿ ಬಸ್‌ಗಳು ಇಂದು ಕೂಡಾ ನಗರದಲ್ಲಿ ಸಂಚಾರ ನಡೆಸುತ್ತಿವೆ.















