ವುಹಾನ್ ಕೋವಿಡ್ ವೈರಸ್ ಸೀಕ್ವೆನ್ಸ್ ಮಾಹಿತಿಯನ್ನು ಡೇಟಾ ಬೇಸ್ನಿಂದ ತೆಗೆಯಲಾಗಿದೆ ಎಂದು ದೃಢೀಕರಿಸಿದ ಅಮೆರಿಕಾ

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಚೀನಾದಲ್ಲಿ ಮೊದಲು ಕೋವಿಡ್-19 ಕಾಣಿಸಿಕೊಂಡ ಸಂದರ್ಭ ಕೊರೋನಾವೈರಸ್ನ ಕೆಲ ಆರಂಭಿಕ ಮಾದರಿಗಳ ಜೆನೆಟಿಕ್ ಸೀಕ್ವೆನ್ಸಿಂಗ್ ಕುರಿತಾದ ಮಾಹಿತಿಗಳನ್ನು ಅದನ್ನು ಸಲ್ಲಿಸಿದ್ದ ಚೀನೀ ಸಂಶೋಧಕರ ಕೋರಿಕೆಯಂತೆ ಮೊದಲು ಸಂಗ್ರಹಿಸಲ್ಪಟ್ಟಿದ್ದ ಅಮೆರಿಕಾದ ಡೇಟಾ ಬೇಸ್ನಿಂದ ತೆಗೆದು ಹಾಕಲಾಗಿದೆ ಎಂದು ಅಮೆರಿಕಾದ ಅಧಿಕಾರಿಗಳು ದೃಢಪಡಿಸಿದ್ದಾರೆ. ಕೋವಿಡ್ ಹೇಗೆ ಆರಂಭಗೊಂಡಿತು ಎಂಬ ಕುರಿತು ಈಗಾಗಲೇ ಇರುವ ಸಂಶಯ ಹಾಗೂ ಊಹಾಪೋಹಗಳಿಗೆ ಈ ಸುದ್ದಿ ಇನ್ನಷ್ಟು ಇಂಬು ನೀಡಿದಂತಾಗಿದೆ.
ಚೀನಾದ ಕೋವಿಡ್ ಕುರಿತಾದ ಡೇಟಾವನ್ನು ಮೊದಲು ಅಮೆರಿಕಾ ಮೂಲದ ಸೀಕ್ವೆನ್ಸ್ ರೀಡ್ ಆರ್ಕೈವ್ಗೆ ಮಾರ್ಚ್ 2020ರಲ್ಲಿ ಸಲ್ಲಿಸಲಾಗಿತ್ತು. ಆದರೆ ಡೇಟಾ ಸಲ್ಲಿಸಿದ್ದ ಅದೇ ಸಂಶೋಧಕ ಮೂರು ತಿಂಗಳ ನಂತರ, ಜೂನ್ ನಲ್ಲಿ "ವಾಪಸ್ ಪಡೆಯಲು ಮನವಿ" ಮಾಡಿದ್ದರು ಎಂದು ಬುಧವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಅಮೆರಿಕಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಹೇಳಿದೆ. ಆರಂಭಿಕ ಜೆನೆಟಿಕ್ ಸೀಕ್ವೆನ್ಸ್ ಮಾಹಿತಿ ಕೋವಿಡ್ ಮೊದಲು ಕಾಣಿಸಿಕೊಂಡಿದ್ದ ಚೀನಾದ ವುಹಾನ್ ನಗರದಿಂದ ಬಂದಿತ್ತು.
ಸೀಕ್ವೆನ್ಸ್ ಮಾಹಿತಿಯನ್ನು ಅಪ್ಡೇಟ್ ಮಾಡಲಾಗಿದೆ ಹಾಗೂ ಇನ್ನೊಂದು ಡೇಟಾ ಬೇಸ್ಗೆ ಸಲ್ಲಿಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಲಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಸೀಕ್ವೆನ್ಸಿಂಗ್ ಕುರಿತು ಡೇಟಾ ಸಲ್ಲಿಸಿದವರಿಗೇ ಅದರ ಮೇಲಿನ ಹಕ್ಕು ಇರುತ್ತದೆ ಹಾಗೂ ವಾಪಸ್ ಪಡೆಯಲು ಅವರು ಮನವಿ ಮಾಡಬಹುದು. ಈ ಕ್ರಮದ ಹಿಂದಿನ ಉದ್ದೇಶವನ್ನು ನಾವು ಅಂದಾಜಿಸಲು ಸಾಧ್ಯವಿಲ್ಲ" ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಹೇಳಿದೆ.