ಸಮಾರಂಭದಲ್ಲಿ ʼಮಟನ್ʼ ಅಡುಗೆ ಮಾಡಿಲ್ಲವೆಂದು ವಧುವನ್ನು ಬಿಟ್ಟು ಬೇರೆ ಯುವತಿಯನ್ನು ವಿವಾಹವಾದ ವರ !

ಜೈಪುರ: ವಿವಾಹ ಸಮಾರಂಭದಲ್ಲಿ ʼಮಟನ್ʼ ಆಹಾರ ತಯಾರಿಸಿಲ್ಲವೆಂದು ತನ್ನ ವಿವಾಹ ಕಾರ್ಯಕ್ರಮವನ್ನು ಬಿಟ್ಟು ಯುವಕನೋರ್ವ ತೆರಳಿದ ಘಟನೆ ಜೈಪುರದ ಸುಕಿಂದಾ ಎಂಬಲ್ಲಿ ನಡೆದಿದೆ. 27ರ ಹರೆಯದ ರಮಾಕಾಂತ್ ಪಾತ್ರ ಎಂಬಾತ ಕಾರ್ಯಕ್ರಮದಿಂದ ಹೊರ ನಡೆದ ಬಳಿಕ ಮನೆಗೆ ತಲುಪುವ ಮುಂಚೆ ಇನ್ನೋರ್ವ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಿಯೋಂಜಾರ್ ನ ಬಂಧಗಾವ್ ನಿವಾಸಿಯಾಗಿರುವ ರಮಾಕಾಂತ್ ಪಾತ್ರ ಬುಧವಾರ ಮಧ್ಯಾಹ್ನದಂದು ತನ್ನ ಪರಿವಾರದೊಂದಿಗೆ ವಿವಾಹ ಕಾರ್ಯಕ್ರಮಕ್ಕೆಂದು ಆಗಮಿಸಿದ್ದ. ಈ ವೇಳೆ ವಧುವಿನ ಕುಟುಂಬಸ್ಥರು ಅವರನ್ನು ಸ್ವಾಗತಿಸಿದ್ದರು. ಕಾರ್ಯಕ್ರಮಗಳು ಮತ್ತು ಸಂಪ್ರದಾಯಗಳು ನಡೆದ ಬಳಿಕ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಆಹಾರ ಬಡಿಸುವ ಮುಂಚೆ ವರನ ಕುಟುಂಬ ಸದಸ್ಯರೋರ್ವರು ಮಟನ್ ಗಾಗಿ ಬೇಡಿಕೆಯಿಟ್ಟಿದ್ದರು. ಆದರೆ ಸಮಾರಂಭದಲ್ಲಿ ಮಟನ್ ಅಡುಗೆ ಮಾಡಿರಲಿಲ್ಲ. ಈ ವೇಳೆ ವರನ ಕುಟುಂಬಸ್ಥರು ವಾಗ್ವಾದಕ್ಕಿಳಿದಿದ್ದು, ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತು ಎನ್ನಲಾಗಿದೆ. ಬಳಿಕ ವರನಿಗೂ ಕಾರ್ಯಕ್ರಮದಲ್ಲಿ ಮಟನ್ ಬಡಿಸಲಿಲ್ಲ ಎನ್ನುವುದು ತಿಳಿದಾಗ ಆತ ಮದುವೆಯನ್ನೇ ನಿರಾಕರಿಸಿದ್ದಾನೆ ಎಂದು ತಿಳಿದು ಬಂದಿದೆ.
ವಧುವಿನ ಕುಟುಂಬಸ್ಥರು ವರನೊಂದಿಗೆ ಹಲವು ಬಾರಿ ವಿನಂತಿ ಮಾಡಿಕೊಂಡರೂ ಆತ ತನ್ನ ನಿರ್ಧಾರ ಬದಲಾಯಿಸದೇ ತನ್ನ ಕುಟುಂಬಸ್ಥರೊಂದಿಗೆ ಸ್ಥಳದಿಂದ ಸಂಬಂಧಿಕರ ಮನೆಗೆ ತೆರಳಿದ್ದು, ಅದೇ ರಾತ್ರಿ ಅಲ್ಲಿನ ಯುವತಿಯೋರ್ವಳನ್ನು ವಿವಾಹವಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.







