ಸಚಿವರು ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ: ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ
ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಲು ನಿರ್ಧಾರ

ಬೆಂಗಳೂರು, ಜೂ.25: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಶಾಸಕರ ಭೇಟಿಗೂ ಸಿಗುತ್ತಿಲ್ಲ. ಸಚಿವರನ್ನು ಭೇಟಿಯಾಗುವುದೇ ದುಸ್ತರವಾಗಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ವಾರಕ್ಕೆ ಎರಡು ದಿನ ವಿಧಾನಸೌಧಕ್ಕೆ ಬಂದು ಶಾಸಕರನ್ನು ಭೇಟಿಯಾಗುತ್ತಾರೆ. ಆದರೆ ಸಚಿವರನ್ನು ಭೇಟಿಯಾಗುವುದೇ ಕಷ್ಟವಾಗಿದೆ. ಈ ಹಿಂದೆ ಮುಖ್ಯಮಂತ್ರಿ ಸಚಿವರ ಸಭೆಯನ್ನು ನಡೆಸಿ ನಮ್ಮ ಸಮಸ್ಯೆಗಳನ್ನು ಪರಿಹರಿಸಿದ್ದರು. ಶೇ 70ರಷ್ಟು ಭಾಗ ಸಚಿವರು ವಿಧಾನಸೌಧಕ್ಕೆ ಭೇಟಿ ನೀಡಿ ಶಾಸಕರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ನಮ್ಮದೇ ಈ ರೀತಿಯ ಸಮಸ್ಯೆಯಾದರೆ ಪಕ್ಷವನ್ನು ಬೇರು ಮಟ್ಟದಲ್ಲಿ ಬೆಳಸಿದ, ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಕಾರ್ಯಕರ್ತರ ಗತಿಯೇನು ಎಂದು ಪ್ರಶ್ನಿಸಿದ ಅವರು, ಅಸಮರ್ಥ ಸಚಿವರನ್ನು ಕೂಡಲೇ ಬದಲಾಯಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಾಧ್ಯಕ್ಷರಿಗೆ ದೂರು: ಸಚಿವರ ನಡೆ ಕುರಿತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಬೇಟಿ ಸಂದರ್ಭದಲ್ಲಿ ಪ್ರಸ್ತಾವ ಮಾಡಿದ್ದು ಸರಿಯಾಗಿಯೇ ಇದೆ. ಸಚಿವರು ಕೇವಲ ಕ್ಯಾಬಿನೆಟ್ ಸಭೆಗಾಗಿ ವಿಧಾನ ಸೌಧಕ್ಕೆ ಬಂದು ಭೇಟಿ ನೀಡುತ್ತಾರೆ ವಿನಃ ಉಳಿದ ಸಂದರ್ಭಗಳಲ್ಲಿ ಸಿಗುವುದೇ ಇಲ್ಲ. ಅವರನ್ನು ಮನೆಯಲ್ಲಿ ಬೇಟಿಯಾಗಬೇಕು. ಆದರೆ ಕಾರ್ಯಕರ್ತರಿಗೆ ಇದು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಸಚಿವರ ನಡೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡುವುದಾಗಿ ತಿಳಿಸಿದರು.







