ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಕಾಂಗ್ರೆಸ್ ಸ್ಥಿತಿ: ಸಚಿವ ಬಿಸಿ ಪಾಟೀಲ್ ಲೇವಡಿ

ಮಂಗಳೂರು, ಜೂ. 25: ಕಾಂಗ್ರೆಸ್‌ನಲ್ಲಿ ಈಗಲೇ ಮುಂದಿನ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಗಾಗಿ ಮುಸುಕಿನ ಗುದ್ದಾಟ ಶುರುವಾಗಿದೆ. ಇದು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಕಾಂಗ್ರೆಸ್ ಸ್ಥಿತಿಯಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಲೇವಡಿ ಮಾಡಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗಾರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 2023ರ ಚುನಾವಣೆಯಲ್ಲೂ ಬಿಜೆಪಿಯೇ ಗೆದ್ದು ಅಧಿಕಾರಕ್ಕೆ ಬರಲಿದೆ. ಆದರೆ ಕಾಂಗ್ರೆಸ್ ಅಧಿಕಾರದ ಕನಸು ಕಾಣುತ್ತಿದೆ. ಸಿಎಂ ಸ್ಥಾನಕ್ಕಾಗಿ ಈಗಲೇ ಡಿಕೆಶಿ, ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜೀನಾಮೆ ಅವರ ವೈಯಕ್ತಿಕ ವಿಚಾರವಾಗಿದ್ದು, ಜಾರಕಿಹೊಳಿಯವರೇ ಸ್ಪಷ್ಟಪಡಿಸಬೇಕು. ಇದುವರೆಗೆ ರಾಜೀನಾಮೆ ಕೊಡುವಂತದ್ದು ಏನೂ ಆಗಿಲ್ಲ. ಅವರು ಹೀಗೆಯೇ ಮುಂದುವರಿಯುವುದು ಸೂಕ್ತ ಎಂದರು.
ಆಪಾದನೆ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಸರಕಾರ ಕಾನೂನು ಮತ್ತು ನ್ಯಾಯದ ಪರ ನಿಲ್ಲುತ್ತೆ. ಪ್ರಕರಣದ ತನಿಖೆ ನಡೆದು ಅವರು ನಿರ್ದೋಶಿಯಾಗಿ ಹೊರ ಬಂದರೆ ಪಕ್ಷ ಅವರಿಗೆ ನೀಡಬೇಕಾದ ಸ್ಥಾನವನ್ನು ಖಂಡಿತಾ ನೀಡುತ್ತದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.







