ಮಂಗಳೂರಲ್ಲಿ ವೀಕೆಂಡ್ ಕರ್ಫ್ಯೂ; ಆಸ್ಪತ್ರೆ, ಮೆಡಿಕಲ್, ಹಾಲಿಗೆ ಮಾತ್ರ ಅವಕಾಶ: ಡಿಸಿಪಿ ಹರಿರಾಮ್ ಶಂಕರ್

ಫೈಲ್ ಫೋಟೊ
ಮಂಗಳೂರು, ಜೂ.25: ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆ- ಮೆಡಿಕಲ್, ಹಾಲು ಹೊರತುಪಡಿಸಿ ಇನ್ನಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಮಂಗಳೂರು ಕಮಿಷನರೇಟ್ನ ಡಿಸಿಪಿ ಹರಿರಾಮ್ ಶಂಕರ್ ಸ್ಪಷ್ಟಪಡಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ಸಮೀಪ ವೀಕೆಂಡ್ ಕರ್ಫ್ಯೂ ಸಂದರ್ಭ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಪೊಲೀಸರಿಗೆ ನಿರ್ದೇಶನ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ಫ್ಯೂ ಕುರಿತ ನಿರ್ದೇಶನಗಳ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೇಂದ್ರ, ಉತ್ತರ, ದಕ್ಷಿಣ ಹಾಗೂ ಸಂಚಾರ ಉಪವಿಭಾಗಗಳಿಗೆ ಸೂಚನೆ ನೀಡಲಾಗಿದೆ. ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಮುಟ್ಟುಗೋಲು ಹಾಕಲು ಸಂಪೂರ್ಣ ಸ್ವತಂತ್ರ ನೀಡಲಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ವಾದ ಮಾಡುವ ಅಗತ್ಯವಿಲ್ಲ. ತುರ್ತು ಸಂದರ್ಭ ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಬೇಕು ಎಂದು ಹೇಳಿದರು.
ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಅವಕಾಶವಿಲ್ಲ. ಆದರೆ ಆನ್ಲೈನ್ ಫುಡ್ ಡೆಲಿವರಿಗೆ ಅನುಮತಿ ನೀಡಲಾಗಿದೆ. ಶನಿವಾರ ಮತ್ತು ರವಿವಾರ ನಗರದ ಒಳದಾರಿಗಳನ್ನು ಮುಚ್ಚಲಾಗುವುದು. ಎಲ್ಲ ವಾಹನಗಳು ಚೆಕ್ಪೋಸ್ಟ್ ಮೂಲಕವೇ ತೆರಳಲು ಸಿದ್ಧತೆ ನಡೆಸಲಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ 35 ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ಪ್ರತೀ ಚೆಕ್ಪೋಸ್ಟ್ನಲ್ಲೂ 10ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ಬಳಸಿಕೊಳ್ಳಲಾವುದು ಎಂದು ಅವರು ತಿಳಿಸಿದ್ದಾರೆ.







