ಉಡುಪಿ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನೆಲೆ: ಹೆಚ್ಚಿದ ಜನಸಂದಣಿ, ನಗರದಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ
ಉಡುಪಿ, ಜೂ. 25: ಉಡುಪಿ ಜಿಲ್ಲೆಯಲ್ಲಿ ಎರಡು ದಿನ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ಇಂದು ನಗರ ಸೇರಿದಂತೆ ಜಿಲ್ಲೆಯ ವಿವಿಧ ಪೇಟೆಗಳಲ್ಲಿ ಜನಸಂದಣಿ ಹಾಗೂ ವಾಹನ ಸಂಚಾರ ಹೆಚ್ಚಾಗಿರುವುದು ಕಂಡುಬಂತು.
ಸೋಮವಾರ ಬೆಳಗ್ಗೆ 5ಗಂಟೆಯವರೆಗೆ ಜಾರಿಯಲ್ಲಿರುವ ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಕೇಂದ್ರ ಹಾಗೂ ಪ್ರಾಣಿಗಳ ಮೇವನ್ನು ವ್ಯಾಪಾರ ಮಾಡುವ ಅಂಗಡಿಗಳಿಗೆ ಮತ್ತು ಬೀದಿ ಬದಿ ವ್ಯಾಪಾರಕ್ಕೆ ಬೆಳಗ್ಗೆ 6ರಿಂದ ಅಪರಾಹ್ನ 2ರವರೆಗೆ ಉಡುಪಿ ಜಿಲ್ಲಾಡಳಿತ ಅವಕಾಶ ನೀಡಿದೆ.
ಉಳಿದಂತೆ ಬಟ್ಟೆ, ಚಿನ್ನಾಭರಣ, ಚಪ್ಪಲಿ, ಫರ್ನಿಚರ್, ಮೊಬೈಲ್ ಸೇರಿದಂತೆ ಇತರ ಅಂಗಡಿಗಳು ತೆರೆಯಲು ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಜನ ಇಂದೇ ತಮಗೆ ಅಗತ್ಯ ಇರುವ ವಸ್ತುಗಳ ಖರೀದಿಗೆ ಬೆಳಗ್ಗೆಯಿಂದ ನಗರಕ್ಕೆ ಆಗಮಿಸುತ್ತಿರುವುದು ಕಂಡುಬಂತು. ಇದರಿಂದ ನಗರದ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಂಡುಬಂತು.
ಬಸ್‌ಗಳ ಸಂಖ್ಯೆ ಕಡಿತ: ಉಡುಪಿ ಹಾಗೂ ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋದಿಂದ ಇಂದು ಒಟ್ಟು 102 ಬಸ್‌ಗಳು ಓಡಾಟ ನಡೆಸಿವೆ. ಅಂತರ್ ತಾಲೂಕು ಮತ್ತು ಜಿಲ್ಲಾ ಮಾತ್ರವಲ್ಲದೆ ಅಂತರ್ ರಾಜ್ಯ ಹೈದರಬಾದ್, ಮಂತ್ರಾಲಯಕ್ಕೂ ಕೆಎಸ್ ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸಿದೆ. ಆದರೆ ವಾರಾಂತ್ಯ ಕರ್ಫ್ಯೂ ಸಮಯ ದಲ್ಲಿ ಬಸ್‌ಗಳ ಸಂಖ್ಯೆ ಕಡಿತ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಉಡುಪಿ ಡಿಪೊ ವ್ಯವಸ್ಥಾಪಕ ಉದಯ ಕುಮಾರ್ ತಿಳಿಸಿದ್ದಾರೆ.
ಅದೇ ರೀತಿ ಸದ್ಯ ಕರಾವಳಿ ಬಸ್ ಮಾಲಕರ ಸಂಘದ ಅಧೀನದಲ್ಲಿರುವ ಭಾರತಿ ಕಂಪೆನಿಯ ನಾಲ್ಕು ಖಾಸಗಿ ಬಸ್‌ಗಳು ಉಡುಪಿ -ಕುಂದಾಪುರ ಮಾರ್ಗದಲ್ಲಿ ಓಡಾಟ ನಡೆಸುತ್ತಿದ್ದು, ಈ ಎರಡು ದಿನಗಳ ಅವಧಿಯಲ್ಲಿ ಜನ ಸಂಚಾರ ಇಲ್ಲದ ಕಾರಣ ಅವುಗಳ ಸಂಖ್ಯೆ ಕೂಡ ಕಡಿಮೆ ಆಗಲಿದೆ ಎಂದು ಮಾಲಕರ ಸಂಘದವರು ತಿಳಿಸಿದ್ದಾರೆ.







