ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅಂತ್ಯಕ್ರಿಯೆ

ಬೆಂಗಳೂರು, ಜೂ.25: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ಜರುಗಿತು.
ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ಬೆಳಗ್ಗೆ ಹಸ್ತಾಂತರಿಸಲಾಯಿತು. ಬಳಿಕ, ಛಲವಾದಿಪಾಳ್ಯದ ಬಿಜೆಪಿ ಕಚೇರಿ ಮುಂಭಾಗದಲ್ಲಿ ರೇಖಾ ಕದಿರೇಶನ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಕೆಲಕಾಲ ಇಡಲಾಗಿತ್ತು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಕೋವಿಡ್-19 ನಿರ್ಬಂಧ ಹಿನ್ನೆಲೆಯಲ್ಲಿ ಸೀಮಿತ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೂ, ಬಿಜೆಪಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.
'ಪಕ್ಷಕ್ಕೆ ಶಕ್ತಿ ತುಂಬಿದ್ದರು': ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರೇಖಾ ಕದಿರೇಶ್ ಬಿಬಿಎಂಪಿ ಸದಸ್ಯೆ ಆಗಿ ರಾಜಕೀಯ ಸಾಮಾಜಿಕವಾಗಿ ಸಾಕಷ್ಟು ಕೆಲಸ ಮಾಡಿದ್ದರು.ಈ ಭಾಗದಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದ್ದರು ಎಂದು ತಿಳಿಸಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಒಳ್ಳೆ ಕೆಲಸ ಕಾರ್ಯದಲ್ಲಿ ರೇಖಾ ತೊಡಗಿಕೊಂಡಿದ್ದರು. ಕೊಲೆಯ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಪೊಲೀಸರ ಬಳಿ ಮಾತನಾಡಿದ್ದು, ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳುವಂತೆ ಹೇಳಲಾಗಿದೆ ಎಂದರು.
ಹತ್ಯೆಯ ಕಾರಣ ಶೀಘ್ರ ಬೆಳಕಿಗೆ: ಬೊಮ್ಮಾಯಿ
ರೇಖಾ ಕದಿರೇಶನ್ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ಅತಿ ಶೀಘ್ರದಲ್ಲಿಯೇ ಬೆಳಕಿಗೆ ಬರಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಖಾ ಕೊಲೆ ಪ್ರಕರಣದ ಹಿಂದೆ ಹಲವಾರು ಆಯಾಮದ ಹಿನ್ನೆಲೆಯಿದೆ. ಈ ಕೊಲೆ ಪ್ರಕರಣದ ಹಿಂದೆ ಹಿಂದೆ ಯಾರಿದ್ದಾರೆ ಎನ್ನುವ ಬಹುತೇಕ ಮಾಹಿತಿಯೊಂದಿಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದರು.
ಕೊಲೆ ನಡೆದಿರುವುದರ ಹಿಂದೆ ಕೌಟುಂಬಿಕ ಅಥವಾ ರಾಜಕೀಯ ಕಾರಣವಿದೆಯೇ ಎನ್ನುವುದು ತನಿಖೆಯಲ್ಲಿ ಸ್ಪಷ್ಟವಾಗಲಿದೆ ಎಂದು ತಿಳಿಸಿದರು.








