ಮುಂಬೈಯಲ್ಲಿ 2,000, ಕೋಲ್ಕತ್ತಾದಲ್ಲಿ 500 ನಕಲಿ ಕೋವಿಡ್ ಲಸಿಕೆ ನೀಡಿಕೆ: ಪೊಲೀಸ್ ಹೇಳಿಕೆ

ಮುಂಬೈ, ಜೂ. 25: ಮುಂಬೈಯಲ್ಲಿ ಸುಮಾರು 2000 ಹಾಗೂ ಕೋಲ್ಕತಾದಲ್ಲಿ 500 ಜನರಿಗೆ ನಕಲಿ ಕೋವಿಡ್ ಲಸಿಕೆ ಹಾಕಲಾಗಿದೆ. ಕೋಲ್ಕತ್ತಾದಲ್ಲಿ ನಕಲಿ ಲಸಿಕೆ ಹಾಕಿಸಿಕೊಂಡವರಲ್ಲಿ ಕೆಲವರು ಅಂಗವಿಕಲರು ಹಾಗೂ ತೃತೀಯಲಿಂಗಿಗಳು ಕೂಡ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿನಾಶಕಾರಿ ಸಾಂಕ್ರಾಮಿಕ ರೋಗ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಎಪ್ರಿಲ್ ಮೇಯಲ್ಲಿ ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೋವಿಡ್ ಲಸಿಕೆ ಉಚಿತವಾಗಿ ನೀಡಲು ನಿರ್ಧರಿಸಿತು. ಅನಂತರ ಕೋವಿಡ್ ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ ತೀವ್ರವಾಗಿ ಏರಿಕೆಯಾಯಿತು. ಮುಂಬೈಯಲ್ಲಿ ಸುಮಾರು 2000 ಜನರಿಗೆ ಕೋವಿಡ್ ಲಸಿಕೆ ಎಂದು ಲವಣಯುಕ್ತ ದ್ರಾವಣವನ್ನು ಚುಚ್ಚಲಾಗಿದೆ. ಈ ಸಂಬಂಧ ಮುಂಬೈಯ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
‘‘ಇವರು ಆಯೋಜಿಸಿದ್ದ ಇತರ 8 ಲಸಿಕಾ ಶಿಬಿರಗಳನ್ನು ಅನಂತರ ನಾವು ಪತ್ತೆ ಹಚ್ಚಿದ್ದೇವೆ’’ ಎಂದು ಜಂಟಿ ಪೊಲೀಸ್ ಆಯುಕ್ತ (ಕಾನೂನು ಹಾಗೂ ಸುವ್ಯವಸ್ಥೆ) ವಿಶ್ವಾಸ್ ಪಾಟಿಲ್ ಹೇಳಿದ್ದಾರೆ. ಈ ನಡುವೆ ಜೆನೆಟಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ ಎಂದು ಹೇಳಲಾದ ನಕಲಿ ನಾಗರಿಕ ಸೇವಾ ಅಧಿಕಾರಿಯೋರ್ವನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಈತ 8ಕ್ಕೂ ಅಧಿಕ ಲಸಿಕಾ ಶಿಬಿರಗಳನ್ನು ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಕೋಲ್ಕತ್ತಾದ ಒಂದು ಶಿಬಿರದಲ್ಲಿ ಕನಿಷ್ಠ 250 ಅಂಗವಿಕಲರಿಗೆ ಹಾಗೂ ತೃತೀಯ ಲಿಂಗಿಗಳಿಗೆ ನಕಲಿ ಕೋವಿಡ್ ಲಸಿಕೆ ಹಾಕಲಾಗಿದೆ. ನಗರದಾದ್ಯಂತ ಸುಮಾರು 500 ಜನರಿಗೆ ನಕಲಿ ಕೋವಿಡ್ ಲಸಿಕೆಯನ್ನು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಟ್ರಾಜೆನಕಾ ಕೊರೋನಾ ವೈರಸ್ ಲಸಿಕೆ ಕೋವಿಶೀಲ್ಡ್ ಎಂದು ನಕಲಿ ಲೇಬಲ್ ಅಂಟಿಸಿದ್ದ ಶೀಸೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೋಲ್ಕತ್ತಾದ ಪೊಲೀಸ್ ಅಧಿಕಾರಿ ಅತಿನ್ ಘೋಷ್ ಹೇಳಿದ್ದಾರೆ.







