ರಾಮಮಂದಿರ ಭೂಮಿ ಖರೀದಿ ಪ್ರಕರಣವನ್ನು ಸಿಬಿಐ, ಈಡಿ ತನಿಖೆ ನಡೆಸಬೇಕು: ಸಂಜಯ್ ರಾವತ್

ಮುಂಬೈ, ಜೂ. 25: ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ನಿಂದ ಭೂಮಿ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ತನಿಖೆಗೆ ಸೂಕ್ತವಾದುದು ಎಂದು ಶಿವಸೇನೆಯ ನಾಯಕ ಸಂಜಯ್ ರಾವತ್ ಶುಕ್ರವಾರ ಹೇಳಿದ್ದಾರೆ. ಭೂಮಿ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸುವಂತೆ ಆಗ್ರಹಿಸಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನಿರ್ಧಾರ ಅಂಗೀಕರಿಸಬೇಕು ಎಂದು ಅವರು ಹೇಳಿದರು.
ಹಣ ಅಕ್ರಮ ವರ್ಗಾವಣೆಯ ತನಿಖೆಗೆ ಸಂಬಂಧಿಸಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ನಾಗಪುರ ಹಾಗೂ ಮುಂಬೈ ಕಟ್ಟಡಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ಕುರಿತ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಶಿವಸೇನೆ ಸಚಿವ ಅನಿಲ್ ಪರಬ್ ಅವರ ವಿರುದ್ಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ತನಿಖೆ ಆಗ್ರಹಿಸಿ ಬಿಜೆಪಿಯ ಮಹಾರಾಷ್ಟ್ರ ಘಟಕ ನಿರ್ಧಾರ ಅಂಗೀಕರಿಸಿರುವುದನ್ನು ತರಾಟೆಗೆ ತೆಗೆದುಕೊಂಡ ರಾವತ್, ‘‘ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ನಿಮ್ಮ ಪಕ್ಷದ ಕಾರ್ಯಕರ್ತರೆ ಅಥವಾ ಐಟಿ ಸೆಲ್ನ ಸದಸ್ಯರೇ?’’ ಎಂದು ಪ್ರಶ್ನಿಸಿದರು.
ತಮ್ಮ ರಾಜಕೀಯ ವೈರಿಗಳನ್ನು ನಿಗ್ರಹಿಸಲು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವನ್ನು ಬಳಸುವ ಮೂಲಕ ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿದೆ ಎಂದು ಅವರು ಹೇಳಿದರು.





