ದ.ಕ. ಜಿಲ್ಲೆಯಲ್ಲಿ ಕೊರೋನ ಪಾಸಿಟಿವಿಟಿ ದರ ಶೇ. 4.50ಕ್ಕೆ ಇಳಿಕೆ: ಜಿಲ್ಲಾಡಳಿತ

ಮಂಗಳೂರು, ಜೂ. 25: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಇಳಿಕೆ ಕಂಡುಬಂದಿದ್ದು, ಪಾಸಿಟಿವಿಟಿ ದರ ಶೇ.4.50ಕ್ಕೆ ಇಳಿಕೆಯಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ ಒಟ್ಟು 377 ಮಂದಿಯಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿದೆ. ಇದೇ ವೇಳೆ 540 ಮಂದಿ ಗುಣಮುಖರಾಗಿದ್ದಾರೆ. 14 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯಲ್ಲಿ ಇದುವರೆಗೆ 91,036 ಮಂದಿಗೆ ಕೊರೋನ ಪಾಸಿಟಿವ್ ಕಂಡುಬಂದಿದ್ದು, ಒಟ್ಟು 1,122 ಮಂದಿ ಸಾವನ್ನಪ್ಪಿದ್ದಾರೆ. 83,500 ಮಂದಿ ಡಿಸ್ಚಾರ್ಜ್ ಆಗಿದ್ದು, ಸದ್ಯ 6,414 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ 74,773 ಪ್ರಕರಣಗಳಿಗೆ ಸಂಬಂಧಿಸಿ 90,84,467 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1 ಬ್ಲ್ಯಾಕ್ ಫಂಗಸ್ ಪ್ರಕರಣ: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ ಒಂದು ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 28 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 35 ಮಂದಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.





