‘ಸೈಬರ್ ಸೆಕ್ಯುರಿಟಿ- ಮಾಹಿತಿ ರಕ್ಷಣೆ’ ಕುರಿತ ವೆಬಿನಾರ್
ಮಂಗಳೂರು, ಜೂ. 25: ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಬಿಸಿಎ ವಿಭಾಗವು ನಗರದ ಸೈಬರ್ ಸೆಪಿಯನ್ಸ್ ಯುನೈಟೆಡ್ ಸಂಸ್ಥೆಯ ಸಹಯೋಗದೊಂದಿಗೆ ‘ಸೈಬರ್ ಭದ್ರತೆ, ಸೈಬರ್ ಅಪರಾಧ ಹಾಗೂ ಮಾಹಿತಿ ರಕ್ಷಣೆ’ಯ ಬಗ್ಗೆ ಅರಿವು ಮೂಡಿಸಲು ವೆಬಿನಾರ್‌ನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಾರತಿ ಸಂಜಯ್ ಪ್ರಭು ಮಾತನಾಡಿ, ದಿನನಿತ್ಯದ ಡಿಜಿಟಲ್ ಉಪಕರಣಗಳಲ್ಲಿ ಬಳಸಲಾಗುವ ಪಾಸ್‌ವರ್ಡ್, ಒಟಿಪಿ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳ ನಿರ್ವಹಣೆಯಲ್ಲಿ ವಿಶೇಷ ಗಮನ ಹರಿಸುವ ಅಂಶಗಳ ಬಗ್ಗೆ ವಿವರಿಸಿದರು.
ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ರಾಬಿನ್‌ಸನ್ ವಿನ್ಸೆಂಟ್ ಡಿಸೋಜ, ಜಾಗತಿಕ ಮಾರುಕಟ್ಟೆಯಲ್ಲಿ ಸರಕಾರವು ಕೆಲವು ವಿದೇಶಿ ಆ್ಯಪ್‌ಗಳನ್ನು ನಿಷೇಧಿಸಿರುವ ಮಾಹಿತಿ ರಕ್ಷಣೆಯ ಕಾರಣಗಳು, ವೈಯಕ್ತಿಕ ಹಾಗೂ ರಾಷ್ಟ್ರಕ್ಕೆ ಸಂಬಂಧಿಸಿದ ಮಾಹಿತಿ, ಪಾಸ್‌ವರ್ಡ್, ಪಿನ್, ಒಟಿಪಿ, ಸೆಕ್ಯುರಿಟಿ ಅಥೆಂಟಿಕೇಶನ್, ಸೋಷಿಯಲ್ ಇಂಜಿನಿಯರಿಂಗ್, ಫಿಶಿಂಗ್, ಸ್ಮಿಶಿಂಗ್ ಅಟ್ಯಾಕ್, ಸೋಶಿಯಲ್ ಬ್ಲಾಕ್‌ಮೇಲ್, ಫೇಸ್‌ಬುಕ್ ಮಾಧ್ಯಮದಿಂದ ನಡೆಯುತ್ತಿರುವ ಅತ್ಯಾಚಾರ ಮತ್ತು ದರೋಡೆಗಳ ಬಗ್ಗೆ ಎಚ್ಚೆತ್ತುಕೊಳ್ಳುವ ವಿಧಾನಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ, ವೈಯುಕ್ತಿಕ ಮಾಹಿತಿ ಹಾಗೂ ಸಾಮೂಹಿಕ ಮಾಹಿತಿಗಳಲ್ಲಿ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಮಾಹಿತಿಗಳನ್ನು ಜೀವನದಲ್ಲಿ ಸಂರಕ್ಷಿಸಿಕೊಳ್ಳುವಿಕೆಯ ಸವಾಲುಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ರತಿ ಪ್ರಾರ್ಥಿಸಿದರು. ಲತಾ ಸಂತೋಷ್ ಸ್ವಾಗತಿಸಿದರು. ಅತಿಥಿ ಉಪನ್ಯಾಸಕ ಅರುಣ್ ಸಿಕ್ವೇರಾ ನಿರೂಪಿಸಿದರು. ವೆಂಕಟೇಶ್ ಕೆ.ಜಿ. ಅತಿಥಿಗಳನ್ನು ಪರಿಚಯಿಸಿದರು. ಅಶ್ವಿನಿ ವಂದಿಸಿದರು.







